ಖಡಕ್ ಡೈಲಾಗ್, ಖತರ್ನಾಕ್ ಲುಕ್‌ನಿಂದ ಹೀರೋಗಳಿಗೆ ಟಕ್ಕರ್ ಕೊಡೋ ಖದರ್ ಖಳನಾಯಕ.. KGF ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಕಿಬಾಯ್‌ಗೆ ಗಾಢ್ ಫಾದರ್ ಆಗಿದ್ದ ಚಾಚಾ ಅಲಿಯಾಸ್ ಹರೀಶ್ ರಾಯ್ ಜೀವನ ಈಗ ಬದಲಾಗಿದೆ. ಯಾರಿಗೂ ಗುರುತು ಸಿಗದ ರೀತಿಯಲ್ಲಿ ಕಲ್ಟ್ ಖಳನಾಯಕ ಬದಲಾಗಿದ್ದಾರೆ.
ಕೆಜಿಎಫ್ ಚಾಚಾನಿಗೆ ಆಗಿದ್ದೇನು?
ಕನ್ನಡ ಚಿತ್ರರಂಗದ ಸ್ಟೈಲಿಶ್ ಖಳನಟ ಹರೀಶ್ ರಾಯ್. ಸುಮಾರು 2 ದಶಕಗಳಿಂದ ಚಿತ್ರರಂಗದಲ್ಲಿರುವ ಇವರು ಕನ್ನಡ ಮಾತ್ರವಲ್ಲದೆ, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಓಂ ಚಿತ್ರದಲ್ಲಿನ ಭೂಗತ ಪಾತಕಿ ರಾಯ್ ಪಾತ್ರದಿಂದ ಗಮನ ಸೆಳೆದವರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ಖಳನಾಯಕನಾಗಿ ನೂರಕ್ಕೂ ಹೆಚ್ಚು ಸಿನಿಮಾದಲ್ಲಿ ಬಣ್ಣ ಹಚ್ಚಿದ ಹರೀಶ್ ರಾಯ್, ಕೆಜಿಎಫ್ ಚಿತ್ರದಲ್ಲಿ ಕೆಜಿಎಫ್ ಚಾಚಾ ಎಂದು ಇಡೀ ಭಾರತ ಚಿತ್ರರಂಗದಲ್ಲೇ ಜನಪ್ರಿಯರಾಗಿದ್ರು. ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಹರೀಶ್ ರಾಯ್‌ಗೆ ಥೈರಾಯ್ಡ್ ಕ್ಯಾನ್ಸರ್ ಆಗಿದೆ. ಆ ಕ್ಯಾನ್ಸರ್ ಬಲೆಯಿಂದ ಹೊರಬರಲು ಹರೀಶ್ ವಿಲ ವಿಲ ಒದ್ದಾಡುತ್ತಿದ್ದು, ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
ಕಾಡುತ್ತಿರುವ ಸಮಸ್ಯೆ ಏನು?
ನಟ ಹರೀಶ್ ರಾಯ್‌ಗೆ ಥೈರಾಯ್ಡ್ ಕ್ಯಾನ್ಸರ್ ಆಗಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳ ಅಗತ್ಯವಿದೆ. ಈ ಕಷ್ಟದ ಸಮಯದಲ್ಲಿ ಅವರು ಸಹಾಯಕ್ಕಾಗಿ ಅಂಗಲಾಚಿದ್ದಾರೆ. 3 ವರ್ಷದ ಹಿಂದೆ ಕೆಜಿಎಫ್ ಕ್ಲೈಮ್ಯಾಕ್ಸ್ ಟೈಮ್‌ನಲ್ಲಿ ನನಗೆ ಉಸಿರು ಕಟ್ಟುವುದು ಸೇರಿದಂತೆ ಲಕ್ಷಣಗಳು ಶುರುವಾಗಿದ್ವು. ಸಿನಿಮಾ ರಿಲೀಸ್ ಆಗಿ 1 ತಿಂಗಳಿಗೆ ಕಂಪ್ಲೀಟ್ ಆಗಿ ಉಸಿರಾಟದ ತೊಂದರೆ ಆಯ್ತು. ಕುತ್ತಿಗೆಯಲ್ಲಿ ದೊಡ್ಡ ಗಡ್ಡೆ ಇತ್ತು. ಅದು ಹರಡಿ ಲಂಗ್ಸ್‌ಗೆ ಹೋಗಿದೆ. ಲಂಗ್ಸ್‌ನಲ್ಲಿ ನೀರು ತುಂಬಿಕೊಂಡು, ತುಂಬಾ ತೊಂದರೆ ಆಯ್ತು. ನಂತರ ತಾವು ತುಂಬಾ ಡೇಂಜರ್‌ನಲ್ಲಿರೋದು ಗೊತ್ತಾಯ್ತು. ತಕ್ಷಣ ಆಪರೇಷನ್ ಮಾಡಿಸಲಾಗಿತ್ತು ಅಂತಾ ಹರೀಶ್ ರಾಯ್ ಹೇಳಿಕೊಂಡಿದ್ದಾರೆ.
ಇನ್ನು ಕ್ಯಾನ್ಸರ್ ನಾಲ್ಕನೇ ಸ್ಟೇಜ್‌ನಲ್ಲಿದ್ದಾಗ ಹರೀಶ್ ರಾಯ್‌ಗೆ ಇಡೀ ಸ್ಯಾಂಡಲ್‌ವುಡ್ ಕಲಾವಿದರ ದಂಡೇ ನೆರವಿನ ಹಸ್ತ ಚಾಚಿತ್ತು.. ದರ್ಶನ್, ದುನಿಯಾ ವಿಜಯ್, ಯಶ್, ಲವ್ಲಿ ಸ್ಟಾರ್ ಪ್ರೇಮ್‌ರಂತರ ಸ್ಟಾರ್ ನಟರು ಸಹಾಯ ಮಾಡಿದ್ದರು. ಈಗ 6 ತಿಂಗಳಿನಿಂದ ಉಸಿರಾಟದ ತೊಂದರೆ ಹೆಚ್ಚಾಗಿದೆ. ಡಾಕ್ಟರ್ ಹತ್ತಿರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೆ. ಆಗ ನನಗೆ ನ್ಯುಮೋನಿಯಾ ಇದೆ ಅನ್ನೋದು ಗೊತ್ತಾಯ್ತು. ಮನೆಯಲ್ಲಿ ಆಕ್ಸಿಜನ್ ತೆಗೆದುಕೊಳ್ತಿದ್ದೆ. ನಂತರ ಸಡನ್ ಆಗಿ ಹೊಟ್ಟೆ ಉಬ್ಬಿಕೊಳ್ಳುವುದಕ್ಕೆ ಶುರುವಾಯಿತು. ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ ಅನ್ನೋದು ಗೊತ್ತಾಯ್ತು ಅಂಥಾ ಹರೀಶ್ ರಾಯ್ ನೋವು ತೋಡಿಕೊಂಡಿದ್ದಾರೆ.
1 ಇಂಜೆಕ್ಷನ್ 3.5 ಲಕ್ಷ!
ಇದಿಷ್ಟೇ ಅಲ್ಲ.. ಹರೀಶ್ ರಾಯ್‌ರ ಸದ್ಯದ ಪರಿಸ್ಥಿತಿ ಹೇಳತೀರದಾಗಿದೆ. ಯಾಕಂದ್ರೆ, ಒಂದೇ ಒಂದು ಇಂಜೆಕ್ಷನ್‌ಗೆ 3 ಲಕ್ಷದ 55 ಸಾವಿರ ರೂಪಾಯಿ ಆಗುತ್ತಂತೆ. ಒಟ್ಟು 70 ಲಕ್ಷ ರೂಪಾಯಿ ರೆಡಿ ಮಾಡ್ಕೊಳ್ಳಿ ಅಂತಾ ವೈದ್ಯರು ಹೇಳಿದ್ದಾರೆ ಅಂತಾ ಹರೀಶ್ ರಾಯ್ ಹೇಳಿದ್ದಾರೆ. ಅಲ್ಲದೇ, ಇಷ್ಟೊಂದು ಹಣವನ್ನು ಎಲ್ಲಿಂದ ತರಲಿ? ನಮ್ಮ ಇಂಡಸ್ಟ್ರಿಯವರು ನನಗೆ ಸಹಾಯ ಮಾಡೇ ಮಾಡ್ತಾರೆ ಅನ್ನೋ ನಂಬಿಕೆ ಇದೆ ಅಂತಾ ಹರೀಶ್ ನೋವು ತೋಡಿಕೊಂಡಿದ್ದು, ಅವರ ನೋವು ಮನ ಮಿಡಿಯುವಂತಿದೆ.
ಆದೇನೆ ಆಗಲಿ… ಮನುಷ್ಯ ಜೀವನ ಅಂದ್ರೆನೇ ಹೀಗೆ, ಯಾರಿಗೆ ಯಾವ ಸಮಯದಲ್ಲಿ ಏನಾಗುತ್ತೆ ಅನ್ನೋದು ಗೊತ್ತೇ ಆಗಲ್ಲ. ಈಗ ಕೆಜಿಎಫ್‌ನ ಚಾಚಾಗೂ ಇದೇ ಸ್ಥಿತಿ ಬಂದಿದೆ. ಕ್ಯಾನ್ಸರ್ ವಿರುದ್ಧ ಶಕ್ತಿ ಮೀರಿ ಹೋರಾಡುತ್ತಿದ್ದು, ಕೇವಲ ಇಂಡಸ್ಟ್ರೀ ಮಾತ್ರವಲ್ಲದೇ, ಕರುನಾಡಿನ ಹೃದಯವರಂತೂ ಅವರ ನೆರವಿಗೆ ನಿಲ್ಲಬೇಕಿದೆ. ಕೈಲಾದಷ್ಟು ಸಹಾಯ ಮಾಡಿ ಅವರ ಜೀವ ಉಳಿಸಲು ನೆರವಾಗಬೇಕಿದೆ.
Read Also : ಕೆಜಿಎಫ್ ಬಾಂಬೆ ಡಾನ್ ಮಂಗಳೂರು ದಿನೇಶ್ ನಿಧನ