ಕೊತ್ತಲವಾಡಿ ಸಿನಿಮಾ ಆಗಸ್ಟ್ 1 ರಂದು ಅದ್ಧೂರಿಯಾಗಿ ರಿಲೀಸ್ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ನಿರ್ಮಾಣದ ಸಿನಿಮಾ ಎಂಬ ಕಾರಣಕ್ಕೆ ಜನರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಈ ಚಿತ್ರದ ಬಗ್ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ಬಂದಿದ್ದು, ಈಗ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ಆದರೆ, ಕೆಲವು ಸಹ ಕಲಾವಿದರಿಗೆ ಒಟಿಟಿಯಲ್ಲಿ ಸಿನಿಮಾ ಬಂದರು ಇನ್ನೂ ಪೇಮೆಂಟ್ ಆಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಅದಕ್ಕೆ ಕುಮ್ಮಕ್ಕು ಎಂಬಂತೆ ಚಿತ್ರದ ಸಹ ಕಲಾವಿದ ಮಹೇಶ್ ಗುರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಯಶ್ ತಾಯಿಗೆ ಈ ವಿಚಾರ ತಲುಪುವವರೆಗೂ ಶೇರ್ ಮಾಡಿ ಎಂದು ಮಹೇಶ್ ಗುರು ಹೇಳಿದ್ದಾರೆ.
ಕೊತ್ತಲವಾಡಿ ಸಿನಿಮಾ ತಂಡದಿಂದ ಪೇಮೆಂಟ್ ಆಗದ ಕುರಿತಾಗಿ ಮಾತನಾಡಿರುವ ಮಹೇಶ್ ಗುರು, ನಾನು ರಂಗಭೂಮಿ ಕಲಾವಿದ. ಸಿನಿಮಾ, ಧಾರಾವಾಹಿಗಳಲ್ಲೂ ನಟಿಸಿದ್ದೇನೆ. ಆಗಸ್ಟ್ 1ರಂದು ಕೊತ್ತಲವಾಡಿ ಸಿನಿಮಾ ರಿಲೀಸ್ ಆಯಿತು. ಯಶ್ ತಾಯಿ ಪುಷ್ಪ ಅವರು ಇದನ್ನು ನಿರ್ಮಾಣ ಮಾಡಿದ್ದರು. ಪೃಥ್ವಿ ಅಂಬಾರ್ ಸಹ ನಟನಾಗಿ ನಾನು ಸಿನಿಮಾದಲ್ಲಿ ಇದ್ದೆ. 3 ತಿಂಗಳಿಗೂ ಅಧಿಕ ಕಾಲ ಸಿನಿಮಾ ಶೂಟ್ನಲ್ಲಿ ಭಾಗಿ ಆಗಿದ್ದೆ. ಈ ಸಿನಿಮಾಗೆ ನಾನು ಆಯ್ಕೆ ಆಗಿದ್ದು ನಿರ್ಮಾಣ ಸಂಸ್ಥೆ ಕಡೆಯಿಂದ ಅಲ್ಲ, ನಿರ್ದೇಶಕ ಶ್ರೀರಾಜ್ ಕಡೆಯಿಂದ. ನಿರ್ದೇಶಕರು ಪ್ಯಾಕೇಜ್ ಮಾತನಾಡಿದ್ದರು. ಸಿನಿಮಾ ಆರಂಭಕ್ಕೂ ಮೊದಲು ಅಡ್ವಾನ್ಸ್ ಕೊಡಿಸ್ತೀನಿ ಎಂದಿದ್ದರು ಆದರೆ ಕೊಡಿಸಿಲ್ಲ. ಸಿನಿಮಾ ಮುಗಿದರೂ ಹಣ ಬಂದಿಲ್ಲ ಎಂದಿದ್ದಾರೆ. ಆ ಬಳಿಕ ಕರೆ ಮಾಡಿದ್ರೆ ಕಾಲ್ ರಿಸೀವ್ ಮಾಡುತ್ತಿಲ್ಲ. ಟೀಸರ್, ಟ್ರೇಲರ್ ಈವೆಂಟ್ ಆದರೂ ನಮಗೆ ಆಹ್ವಾನವೇ ಕೊಡಲಿಲ್ಲ. ಈಗ ಸಿನಿಮಾ ಒಟಿಟಿಗೆ ಬಂದಿದೆ. ಆದರೂ ನಮಗೆ ಪೇಮೆಂಟ್ ಆಗಿಲ್ಲ. ನಿರ್ಮಾಪಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿಡಿಯೋ ಮಾಡಿದ್ದೇನೆ. ಇದು ಪುಷ್ಪಾ ಅವರಿಗೂ ಗೊತ್ತಾಗಲಿ ಎಂದು ಮಹೇಶ್ ಗುರು ಹೇಳಿದ್ದು, ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ.
Read Also : ಹೊಸ ಪಕ್ಷಕ್ಕೆ ಯತ್ನಾಳ್ ನಾಂದಿ..? : ಪ್ರತಾಪ್ ಸಿಂಹ ಹೇಳೋದೇನು?
