ಭಾರತ, ಪಾಕ್ ಸಂಘರ್ಷದ ಹಿನ್ನೆಲೆಯಲ್ಲಿ ಐಪಿಎಲ್ 2025ರ ಟೂರ್ನಿಯನ್ನ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಕದನ ವಿರಾಮದ ಬಳಿಕ ಐಪಿಎಲ್ ಪಂದ್ಯಾವಳಿ ಪುನರ್ ಆರಂಭಿಸುವ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಇದೇ ಮೇ 17ರಿಂದ ಐಪಿಎಲ್ 2025 ಮತ್ತೆ ಆರಂಭಿಸಲು ಬಿಸಿಸಿಐ ನಿರ್ಧಾರ ಮಾಡಿದೆ.
ಇದೇ ಮೇ 17ರಿಂದ ಐಪಿಎಲ್ ಹಣಾಹಣಿ ಮತ್ತೆ ಆರಂಭವಾಗುತ್ತಾ ಇದ್ರೆ ಜೂನ್ 03ಕ್ಕೆ ಐಪಿಎಲ್ ಮೆಗಾ ಫೈನಲ್ ನಡೆಸಲು ತೀರ್ಮಾನ ಮಾಡಲಾಗಿದೆ. ಈ ಬಾರಿಯ ಐಪಿಎಲ್ ಅನ್ನು ಬಿಸಿಸಿಐ ಒಂದು ವಾರದ ಕಾಲ ಅಮಾನತುಗೊಳಿಸಲಾಗಿತ್ತು. ಇದೀಗ ಐಪಿಎಲ್ 2025ರ ನೂತನ ವೇಳಾಪಟ್ಟಿ ಪ್ರಕಟವಾಗಿದೆ. ಬಿಸಿಸಿಐ ಅಧಿಕೃತ ಮಾಹಿತಿಯಂತೆ ಉಳಿದ ಪಂದ್ಯಗಳನ್ನು ಬೆಂಗಳೂರು, ಜೈಪುರ, ದೆಹಲಿ, ಲಕ್ನೋ, ಅಹ್ಮದಾಬಾದ್ ಮತ್ತು ಮುಂಬೈ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಐಪಿಎಲ್ ಹೊಸ ವೇಳಾಪಟ್ಟಿಯಂತೆ ಮೇ 17ರಂದು ನಮ್ಮ ಬೆಂಗಳೂರಿನಲ್ಲೇ ಆರ್ಸಿಬಿ ಹಾಗೂ ಕೊಲ್ಕತ್ತಾ ನೈಟ್ ರೈಟರ್ಸ್ ಪಂದ್ಯ ನಡೆಯುತ್ತಿದೆ. ಉಳಿದಂತೆ 6 ಕ್ರೀಡಾಂಗಣದಲ್ಲಿ ತಲಾ 2 ಪಂದ್ಯದಂತೆ ಒಟ್ಟು 12 ಲೀಗ್ ಪಂದ್ಯಗಳಿಗೆ ಸ್ಥಳ ನಿಗಧಿಯಾಗಿದೆ. ಪ್ಲೇ ಆಫ್, ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಕ್ಕೆ ಮುಂದಿನ ದಿನಗಳಲ್ಲಿ ಜಾಗ ಪ್ರಕಟಿಸಲಾಗುತ್ತಿದೆ.
ಉಳಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವುದು ಖಚಿತ. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಣಕ್ಕಿಳಿದು ಜಯಗಳಿಸುವ ಮೂಲಕ ನೇರವಾಗಿ ಫೈನಲ್ಗೇರಬಹುದು. ಹೀಗಾಗಿ ಆರ್ಸಿಬಿ ಪಾಲಿಗೆ ಮುಂದಿನ ಮೂರು ಪಂದ್ಯಗಳೂ ಕೂಡ ತುಂಬಾ ಮಹತ್ವದ್ದು ಎನ್ನಬಹುದು.
