ಟೆಸ್ಟ್‌ಗೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಗುಡ್‌ಬೈ ಹೇಳಿದ್ಮೇಲೆ.. ಟೀಂ ಇಂಡಿಯಾ ಕಥೆ ಮುಗೀತು.. ಆಂಗ್ಲರ ಸಾಮ್ರಾಜ್ಯದಲ್ಲಿ ಇಂಗ್ಲೆಂಡ್‌ ಆಟಗಾರರ ಮುಂದೆ ಮಕಾಡೆ ಮಲಗ್ತಾರೆ ಅಂತಿದ್ದವರೆಲ್ಲಾ ಈಗ ಥಂಡಾ ಹೊಡೆದಿದ್ದಾರೆ.. ಯಾಕಂದ್ರೆ ಭಾರತ ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ನೀಡಿದೆ.. 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 2-2 ಅಂತರದಿಂದ ಸರಣಿ ಡ್ರಾ ಮಾಡಿಕೊಂಡು ತನ್ನ ಪರಾಕ್ರಮವನ್ನು ಸಾಬೀತು ಮಾಡಿದೆ.. ಕೋಚ್‌ ಗಂಭೀರ್‌ ಗರಡಿಯಲ್ಲಿ ಯಂಗ್‌ ಗನ್‌ಗಳು ರೆಡಿಯಾಗಿವೆ.. ಸೋಲು ಗೆಲವು ಹೊರತಾಗಿಯೂ ಕೆಲವು ಆಟಗಾರರು ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ್ದಾರೆ..

ಕೊಹ್ಲಿ ಸ್ಥಾನದಲ್ಲಿ ಮಿಂಚಿದ ಶುಭ್‌ಮನ್‌ ಗಿಲ್‌..!
ಕೊಹ್ಲಿ, ರೋಹಿತ್‌ ಬಳಿಕ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಗಿಲ್‌ ಅತ್ಯತ್ತಮವಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.. ತಮ್ಮ ಕ್ಯಾಪ್ಟನ್ಸಿಯ ಮೊದಲ ಸರಣಿಯಲ್ಲಿ ಅನನುಭವಿ ತಂಡವನ್ನು ಮುನ್ನಡಿಸಿ ಪ್ರತಿ ಪಂದ್ಯವನ್ನು ಐದನೇ ದಿನದ ತನಕ ಕೊಂಡೊಯ್ದು ಇಂಗ್ಲೆಂಡ್‌ಗೆ ಟಫ್‌ ಫೈಟ್‌ ಕೊಟ್ಟಿದ್ದಾರೆ.. ಬ್ಯಾಟಿಂಗ್‌ನಲ್ಲಂತೂ ಒಂದು ದ್ವಿಶತಕ, ಮೂರು ಶತಕ ಸಿಡಿಸಿ 754 ರನ್‌ ಸಿಡಿಸಿದ್ದಾರೆ.. ಈ ಮೂಲಕ ಇಂಗ್ಲೆಂಡ್‌ ಸರಣಿಯಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ನಾಯಕರ ಪಟ್ಟಿಯಲ್ಲಿ ಗಿಲ್‌ ಎರಡನೇ ಸ್ಥಾನಕ್ಕೆ ಏರಿದ್ದಾರೆ.. ಗವಾಸ್ಕರ್‌, ಬ್ರಾಡ್‌ಮನ್‌ ದಾಖಲೆಗಳಿಗೆ ಉತ್ತಮ ಕಾಂಪಿಟಿಷನ್‌ ಕೊಟ್ಟಿದ್ರು.. ಕೊಹ್ಲಿಯಿಂದ ತೆರವಾಗಿದ್ದ ನಾಲ್ಕನೇ ಕ್ರಮಾಂಕಕ್ಕೆ ನಾಯಕ ಶುಭ್‌ಮನ್‌ ಗಿಲ್‌ ಹೇಳಿ ಮಾಡಿಸಿದಂತಿದೆ.. ಸ್ಥಿರ ಪ್ರದರ್ಶನ, ಬಿರುಸಿನ ಆಟದ ಮೂಲಕ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆ.. ಪ್ರಸ್ತುತ ಸರಣಿಯಲ್ಲಿ ಅತಿಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ..

ಓಪನಿಂಗ್‌ನಲ್ಲಿ ರಾಹುಲ್‌, ಜೈಸ್ವಾಲ್‌ ಯಶಸ್ವಿ..!
ಓಪನಿಂಗ್‌ನಲ್ಲಂತೂ ಕೆಎಲ್‌.ರಾಹುಲ್‌, ಯಶಸ್ವಿ ಜೈಸ್ವಾಲ್‌ ಸಖತ್‌ ಮಿಂಚಿದ್ದಾರೆ.. 5 ಪಂದ್ಯಗಳಲ್ಲಿ ತಲಾ ಎರಡೆರಡು ಸೆಂಚುರಿ ಸಿಡಿಸಿ ಮಿಂಚಿದ್ದಾರೆ.. ಇನ್ನೊಂದು ಪಂದ್ಯದಲ್ಲಿ ರಾಹುಲ್‌ 90 ರನ್‌ ಗಳಿಸಿ ಶತಕವಂಚಿತರಾದ್ರೂ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.. ಆದ್ರೂ ಜೈಸ್ವಾಲ್‌ ಕೆಲವು ಪಂದ್ಯಗಳಲ್ಲಿ ಬಹುಬೇಗ ಔಟ್‌ ಆದ ಕಾರಣ ಕೊಂಚ ಸ್ಥಿರತೆಯನ್ನ ಪಡೆದುಕೊಳ್ಳಬೇಕಿದೆ.. ತಮ್ಮ ಬಿರುಸಿನ ಆಟದ ಶೈಲಿ ಹಾಗೂ ಯುವ ಆಟಗಾರನೆಂಬ ಪಟ್ಟಿ ಅವರಿಗೆ ಮತ್ತಷ್ಟು ಅವಕಾಶ ಕಲ್ಪಿಸುವುದರಲ್ಲಿ ಸಹಕಾರಿಯಾಗಲಿದೆ.. ಅಲ್ಲಿಗೆ ಟೆಸ್ಟ್‌ನಲ್ಲಿ ಓಪನಿಂಗ್‌ ಬಗೆಗೆ ಇದ್ದ ಗೊಂದಲ ಬಗೆಹರಿದಂತೆ..

ಮುಂದುವರೆದ 3ನೇ ಕ್ರಮಾಂಕದ ಸಂಕಷ್ಟ..!
ಟೀಂ ಇಂಡಿಯಾದಲ್ಲಿ ಮೂರನೇ ಕ್ರಮಾಂಕಕ್ಕೆ ಹಲವು ವರ್ಷಗಳಿಂದ ಸಾಕಷ್ಟು ಪರೀಕ್ಷೆಗಳು ನಡೆಯುತ್ತಲೇ ಇವೆ.. ಪುಜಾರ ನಂತರ ಯಾರೂ ಕೂಡ ಆ ಸ್ಥಾನದಲ್ಲಿ ಗಟ್ಟಿಯಾಗಿ ಕಚ್ಚಿಕೊಂಡಿಲ್ಲ.. ಇದೀಗ ಸತತ ಎಂಟು ವರ್ಷಗಳ ಬಳಿಕ ಕಮ್‌ಬ್ಯಾಕ್‌ ಮಾಡಿದ್ದ ಕರುಣ್‌ ನಾಯರ್‌ ತಮಗೆ ಸಿಕ್ಕ ಅವಕಾಶವನ್ನು ಕೈಚೆಲ್ಲಿ ಕೂತಿದ್ದಾರೆ.. ಕೇವಲ ಒಂದು ಅರ್ಧ ಶತಕ ಬಿಟ್ರೆ ಗರಿಷ್ಠ ರನ್‌ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.. ಇತ್ತ ಸಾಯಿ ಸುದರ್ಶನ್‌ ಕೂಡ ನಿರೀಕ್ಷಿತ ಪ್ರದರ್ಶನವನ್ನೂ ತೋರಿಸಿಲ್ಲ.. ಆದ್ರೆ 5ನೇ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸಮನ್‌ ರಿಷಭ್‌ ಪಂತ್‌ ಎಂದಿನಂತೆ ಪವರ್‌ಫುಲ್‌ ಆಟವಾಡಿದ್ದಾರೆ.. ಎರಡು ಶತಕ, ಮೂರು ಅರ್ಧ ಶತಕ ಸಿಡಿಸಿದ್ದಾರೆ.. ಸದ್ಯ ಗಾಯದಿಂದ ಹೊರಗುಳಿದರೂ ಮುಂದಿನ ದಿನಗಳಲ್ಲಿ 5ನೇ ಕ್ರಮಾಂಕದಲ್ಲಿ ಮುಂದುವರಿಯಲಿದ್ದಾರೆ..

ಜಡ್ಡು-ವಾಷಿಂಗ್‌ಟನ್‌ ಜೋಡಿಯ ಮೋಡಿ..!
ಇನ್ನೂ 6ನೇ ಮತ್ತು 7ನೇ ಕ್ರಮಾಂಕದಲ್ಲಿ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್‌ಟನ್‌ ಸುಂದರ್‌ ಎಲ್ಲರ ಗಮನ ಸೆಳೆದಿದ್ದಾರೆ.. ನಂಬರ್‌ ಒನ್‌ ಟೆಸ್ಟ್‌ ಆಲ್‌ರೌಂಡರ್‌ ಜಡೇಜಾ 2-3 ಬಾರಿ ಭಾರತವನ್ನು ಸೋಲಿನ ಸುಳಿಯಿಂದ ಪಾರು ಮಾಡಿದ್ದಾರೆ.. ವಾಷಿಂಗ್‌ಟನ್‌ ಕೂಡ ಬ್ಯಾಟಿಂಗ್‌ನಲ್ಲಿ ಸೆಂಚುರಿ, ಬೌಲಿಂಗ್‌ನಲ್ಲಿ ಭರ್ಜರಿ ವಿಕೆಟ್‌ಗಳನ್ನು ಪಡೆದು ಹೊರ ಭರವಸೆ ಮೂಡಿಸಿದ್ದಾರೆ.. ಇವರಿಬ್ಬರ ಶತಕದ ಜೊತೆಯಾಟ, ಸ್ಥಿರ ಪ್ರದರ್ಶನ, ಬೌಲಿಂಗ್‌ನಲ್ಲು ಕಟ್ಟಿ ಹಾಕುವ ಕೌಶಲ್ಯದಿಂದ ಇವರ ಪ್ಲೇಸ್‌ ಸೇಫ್‌ ಅಂತ ಹೇಳಲಾಗ್ತಿದೆ..

ಬೌಲಿಂಗ್‌ನಲ್ಲಿ ಯಾರ ಸ್ಥಾನ ಭದ್ರ..?
ಪ್ರಸ್ತುತ ಸರಣಿಯಲ್ಲಿ ಭಾರತ ಎಡವಿರೋದೆ ಬೌಲಿಂಗ್‌ನಲ್ಲಿ.. ಜಸ್‌ಪ್ರೀತ್ ಬುಮ್ರಾ ಕೆಲವು ಮ್ಯಾಚ್‌ಗಳಲ್ಲಿ ಐದೈದು ವಿಕೆಟ್‌ಗಳನ್ನು ತೆಗೆದುಕೊಂಡ್ರೂ ಫಿಟ್ನೆಸ್‌ ಸಮಸ್ಯೆಯಿಂದ ಹೊರಗುಳಿಯಬೇಕಾಯ್ತು.. ಆದ್ರೂ ನಂಬರ್‌ ಒನ್‌ ಟೆಸ್ಟ್‌ ಬೌಲರ್‌ ಸ್ಥಾನ ಅವರ ಕೈಯಲ್ಲೇ ಇದೆ.. ಯಾವಾಗ ಬೇಕಿದ್ರೂ ಸಿಡಿದು ಭಾರತಕ್ಕೆ ಗೆಲವು ತಂದುಕೊಡುವ ಸಾಮರ್ಥ್ಯ ಅವರಲ್ಲಿದೆ.. ಇತ್ತ ಮೊಹಮದ್‌ ಸಿರಾಜ್‌ ಕೂಡ ಬೆಂಕಿಯಿಂತೆ ಬೌಲಿಂಗ್‌ ಮಾಡಿ ಅದ್ಭುತ ಫೈಫರ್‌ಗಳನ್ನು ಪಡೆದು ತಮ್ಮ ಸ್ಥಾನವನ್ನು ಖಚಿತ ಮಾಡಿಕೊಂಡಿದ್ದಾರೆ.. ಇನ್ನೂ ಕನ್ನಡಿಗ ಪ್ರಸಿದ್‌ ಕೃಷ್ಣ ಕೆಲವೊಮ್ಮ ಭರ್ಜರಿ ಬೌಲಿಂಗ್‌ ಮಾಡಿ ವಿಕೆಟ್‌ಗಳನ್ನು ಪಡೆದುಕೊಂಡ್ರೂ ಸಾಕಷ್ಟು ರನ್‌ಗಳನ್ನು ಬಿಟ್ಟುಕೊಟ್ಟು ಕೊಂಚ ಎಡವಿದ್ದಾರೆ.. ಹೀಗಾಗಿ ಅವರ ಸ್ಥಾನವೂ ಪಲ್ಲಟವಾಗುವ ಸಾಧ್ಯತೆ ಹೆಚ್ಚಿದೆ..

ಟೆಸ್ಟ್‌ನಲ್ಲಿ ಸರ್ವಶ್ರೇಷ್ಠರಾಗ್ತಾರಾ ಜೋ ರೂಟ್..?
ಇನ್ನೂ ಇಂಗ್ಲೆಂಡ್‌ ತಂಡ ಕೂಡ ಸ್ಫೋಟಕ ಆಟವಾಡಿದೆ.. ನಾಯಕ ಸ್ಟೋಕ್ಸ್‌ ನೇತೃತ್ವದ ಇಂಗ್ಲೆಂಡ್‌ ತಂಡ ತನ್ನ ಬೇಸ್‌ ಬಾಲ್‌ ಆಟವನ್ನೇ ಮುಂದುವರಿಸಿದೆ.. ಟೆಸ್ಟ್‌ ಗ್ರೇಟ್‌ ಅಂತ ಕರಿಯಲ್ಪಡುವ ಜೋ ರೂಟ್‌ ಈ ಸರಣಿಯಲ್ಲಿ 3 ಶತಕ ಸಿಡಿಸಿ ತವರಿನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.. ಈ ಮೂಲಕ ಶ್ರೀಲಂಕಾದ ಮಹೇಲ ಜಯವರ್ಧನೆ, ಸೌತ್ ಆಫ್ರಿಕಾದ ಕಾಲಿಸ್ ಹಾಗೂ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆ ಮುರಿದಿದ್ದಾರೆ.. ಜೊತೆಗೆ ಸರ್ವಶ್ರೇಷ್ಠ ಸಚಿನ್‌ ತೆಂಡುಲ್ಕರ್‌ ಟೆಸ್ಟ್‌ ರನ್ಸ್‌ ಹಾಗೂ ಶತಕಗಳ ದಾಖಲೆಯನ್ನು ಮುರಿಯುವಲ್ಲಿ ತೀರ ಸನಿಹವಾಗಿದ್ದಾರೆ..

ಒಟ್ನಲ್ಲಿ ಟೀಂ ಇಂಡಿಯಾದ ಹಲವು ಆಟಗಾರರು ಅತ್ಯತ್ತಮ ಪ್ರದರ್ಶನ ನೀಡಿ ಬಹುತೇಕ ತಮ್ಮ ತಮ್ಮ ಸ್ಥಾನಗಳನ್ನು ಸೇಫ್‌ ಮಾಡಿಕೊಂಡಿದ್ದಾರೆ.. ಇತ್ತ ಬ್ಯಾಟಿಂಗ್‌ಗೂ ಸೈ, ಕ್ಯಾಪ್ಟನ್ಸಿಗೂ ಸೈ ಅಂತ ಅನುಭವವೇ ಇಲ್ಲದ ಗಿಲ್‌ ಅತ್ಯದ್ಭುತವಾಗಿ ನಾಯಕತ್ವ ನಿರ್ವಹಿಸಿದ್ದಾರೆ.. ಅನುಭವಿ ಆಟಗಾರರಿಗೆ ಕೊಕ್‌ ಕೊಟ್ಟು ಯುವ ತಂಡ ಕಟ್ಟಿದ ಗಂಭೀರ್‌ ಕೂಡ ತಂಡವನ್ನ ನಿಭಾಯಿಸುವುದ್ರಲ್ಲಿ ಪಾಸ್‌ ಆಗಿದ್ದಾರೆ.. ಆದ್ರೆ ಇದೇ ತಂಡ ತವರಿನಲ್ಲಿ ಹೇಗೆ ಪ್ರದರ್ಶನ ನೀಡುತ್ತೆ.. ಎಷ್ಟು ಸ್ಥಿರವಾಗಿರುತ್ತೆ ಅನ್ನೋದು ಕಾದು ನೋಡಬೇಕಿದೆ..

Share.
Leave A Reply