ರಾಜ್ಯದಲ್ಲಿ ಎಲ್ಲ ಮಕ್ಕಳಿಗೂ ನಾನು ವಿಜ್ಞಾನಿ, ಹೊಸ ಹೊಸ ಆವಿಷ್ಕಾರ ಮಾಡಬೇಕು ಎಂಬ ಕನಸು ಇರುತ್ತದೆ. ಆದರೆ ಅನೇಕ ಮಕ್ಕಳಿಗೆ ಸರಿಯಾದ ಸೌಲಭ್ಯದ ಕೊರತೆಯ ಕಾರಣ ವಿಜ್ಞಾನಿಕ ಶಿಕ್ಷಣದಿಂದ ವಂಚಿತರಾಗುತ್ತಾರೆ. ಗುಣಮಟ್ಟದ ಶಿಕ್ಷಣ, ಆರ್ಥಿಕ ಸಮಸ್ಯೆ, ಸೌಕರ್ಯಗಳ ಕೊರತೆ, ಹೀಗೆ ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ. ಇಂತಹ ವಿದ್ಯಾರ್ಥಿಗಳು ವಂಚಿತರಾಗದೆ ಉತ್ತಮ ಶಿಕ್ಷಣ ಪಡೆದು ವಿಜ್ಞಾನಿ ಆಗಬೇಕು ಎಂಬ ಆಶಯದೊಂದಿಗೆ ಹುಲಿಕಲ್ ನಟರಾಜ್ ಸಹಯೋಗದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ʼನಾನು ವಿಜ್ಞಾನಿʼ ಎಂಬ 8 ದಿನಗಳ ತರಬೇತಿ ಶಿಬಿರವನ್ನ ಹಮ್ಮಿಕೊಂಡಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬ್ಯಾಸೆಂಟ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಈ ಶಿಬಿರ ಅಕ್ಟೋಬರ್ 1ರಂದು ಆರಂಭವಾಗಿ 9ರಂದು ಯಶಸ್ವಿಯ ತೆರೆ ಕಂಡಿತು. ಆರ್ಯಭಟ ಕರ್ನಾಟಕ, ಭಾರತ್ ಡೊಮ್ ಕರ್ನಾಟಕ, ಇಸ್ರೋ ಭಾರತ ಸರ್ಕಾರ, ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್, 317 ಎಫ್, ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ, ಭಾರತ ಸೇವಾ ದಳ ಕರ್ನಾಟಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ ಮತ್ತು ಕಲೆಗಳ ಪ್ರಗತಿ ಸಂಸ್ಥೆ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶಿಬಿರಕ್ಕೆ ಯಶಸ್ವಿ ತೆರೆ ಬಿದ್ದಿದೆ.
ವಿದ್ಯಾರ್ಥಿಗಳಗೆ ಟೆಲಿಸ್ಕೋಪ್ ತಯಾರಿಕೆಯಂತಹ ವಿಷಯಗಳನ್ನು ಒಳಗೊಂಡಿರುವ 8 ದಿನಗಳ ತರಬೇತಿಯನ್ನು ನೀಡಬೇಕೆಂದು, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಡೆಸಿದ ʼನಾನು ವಿಜ್ಞಾನಿʼ ಎಂಬ ತರಬೇತಿ ಶಿಬಿರದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 160 ಮಕ್ಕಳು ಭಾಗವಹಿಸಿದ್ದರು. ಈ ಶಿಬಿರವು ಅನೇಕ ದಾಖಲೆಗಳಿಗೆ ಸಾಕ್ಷಿಯಾಯ್ತು. ವರ್ಲ್ಡ್ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕ ರಾಜ್ಯದ ಹೆಮ್ಮೆಗೆ ಕಾರಣವಾಯಿತು. ಈ ಶಿಬಿರದ ಸಾರಥ್ಯವನ್ನ ವೈಜ್ಞಾನಿಕ ಸಂಶೋಧಕರು ಆದ ಹುಲಿಕಲ್ ನಟರಾಜ್ ವಹಿಸಿದ್ದು, ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್. ಕಿರಣ್ಕುಮಾರ್, ನ್ಯಾ. ನಾಗಮೋಹನ್ದಾಸ್, ಪಿಜಿಆರ್ ಸಿಂಧ್ಯಾ ಉಪಸ್ಥಿತರಿದ್ದರು. ಇನ್ನು ಟೆಲಿಸ್ಕೋಪ್ ತಯಾರಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ವಿತರಿಸುವ ಮೂಲಕ ಪ್ರೊತ್ಸಾಹಿಸಲಾಯಿತು. ಈ ಕುರಿತಾಗಿ ಮಾತನಾಡಿದ ವೈಜ್ಞಾನಿಕ ಸಂಶೋಧಕರಾದ ಹುಲಿಕಲ್ ನಟರಾಜ್, ಮಕ್ಕಳ ಆಸಕ್ತಿ, ಏಕಾಗ್ರತೆ, ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಹೇಳಿದರು. ಇದೇ ವೇಳೆ, ಶಿಬಿರದಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿ, ಪ್ರಮಾಣ ಪತ್ರ ವಿತರಿಸಿದರು. ಮತ್ತೊಂದೆಡೆ, ಹುಲಿಕಲ್ ನಟರಾಜ್ ಸಾರಥ್ಯದ ರಾಜ್ಯ ವೈಜ್ಞಾನಿಕ ಪರಿಷತ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.