ಬೆಂಗಳೂರು: ಕೆಎಸ್ಆರ್ಟಿಸಿ (KSRTC) ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮದಲ್ಲಿ ಕೆಲಸ ನಿರ್ವಹಿಸುವ ಮಹಿಳಾ ನೌಕರರಿಗೆ ಋತುಚಕ್ರದ ರಜೆ (Menstrual Leave) ನೀಡಲು ಸಾರಿಗೆ ನಿರ್ಧಿರಿಸಿ ಆದೇಶ ಹೊರಡಿಸಿದೆ.
ಜನವರಿ 1ರಿಂದ ಮಹಿಳಾ ಡ್ರೈವರ್, ಕಂಡಕ್ಟರ್ ಸೇರಿ ಮಹಿಳಾ ಸಿಬ್ಬಂದಿ ಋತುಚಕ್ರದ ರಜೆ ಪಡೆಯಬಹುದಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಎಂಡಿ ಅಕ್ರಂ ಪಾಷ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸರ್ಕಾರವು ಮಹಿಳಾ ನೌಕರರ ಮನೋಸ್ಥೆರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೂ ಕಲ್ಪಿಸಿ ಷರತ್ತು ಮತ್ತು ನಿಬಂಧನೆಗೊಳಪಟ್ಟು ರಜೆ ಮಂಜೂರು ಮಾಡಲು ಆದೇಶ ಹೊರಡಿಸಿದೆ. ಈ ಮೂಲಕ ಮಹಿಳಾ ನೌಕರರು ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಋತುಚಕ್ರ ಹೊಂದಿರುವ 18 ರಿಂದ 52 ವಯಸ್ಸಿನ ನಿಗಮದ ಮಹಿಳಾ ನೌಕರರು ಈ ರಜೆ ಪಡೆಯಬಹುದು. ಸಾಂದರ್ಭಿಕ ರಜೆ ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆ ಮಂಜೂರು ಮಾಡಬಹುದು. ಈ ರಜೆ ಪಡೆಯಲು ವೈದ್ಯಕೀಯ ಪ್ರಮಾಮ ಪತ್ರ ಒದಗಿಸುವ ಅಗತ್ಯವಿಲ್ಲ. ಈ ರಜೆ ರಜೆ ಅಥವಾ ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು. ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸಬಾರದು. ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು ಹಾಗೂ ಮುಂದಿನ ತಿಂಗಳಿಗೆ ಅವಕಾಶವಿರುವುದಿಲ್ಲ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
