ರಾಮನಗರ: ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 6 ಜನ ಸಜೀವವಾಗಿ ದಹನವಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿದೆ. ಈ ಮಧ್ಯೆ ಪೊಲೀಸರು ಮೃತದೇಹ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಘಟನೆಗೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸಚಿವರು ಹೇಳಿದ್ದಾರೆ.

ಲಾರಿ ಚಾಲಕನ ರ‍್ಯಾಷ್ ಡ್ರೈವ್ ಹಾಗೂ ಅಜಾಗರೂಕತೆಯಿಂದ ಬಸ್ ಅಪಘಾತ (Chitradurga Bus Accident)ವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.

ದುರಂತದ ಬಗ್ಗೆ ಮಾಗಡಿಯಲ್ಲಿ ಮಾತನಾಡಿದ ಅವರು, ಗೋಕರ್ಣಕ್ಕೆ ಹೋಗುತ್ತಿದ್ದ ಸೀಬರ್ಡ್ ಬಸ್‌ಗೆ ಲಾರಿ ಡಿಕ್ಕಿಯಾಗಿದೆ. ಡಿವೈಡರ್ ದಾಟಿ ಬಂದು ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಲಾರಿ ಗುದ್ದಿದೆ. ಈಗಾಗಲೇ ಸಾರಿಗೆ ಇಲಾಖೆ ಕಮಿಷನರ್ ಸ್ಥಳಕ್ಕೆ ಹೋಗಿದ್ದಾರೆ. ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಎಂದಿದ್ದಾರೆ.

ಇತ್ತೀಚೆಗೆ ಬಸ್ ದುರಂತದ ಘಟನೆ ನಡೆದಾಗಿನಿಂದ ಸಾರಿಗೆ ಇಲಾಖೆ ಸಾಕಷ್ಟು ಕ್ರಮ ವಹಿಸಿದೆ. ಬಸ್‌ನಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ಎಚ್ಚರ ವಹಿಸಿದ್ದೇವೆ. 2013ರಲ್ಲೂ ನಾನು ಸಾರಿಗೆ ಸಚಿವನಾಗಿದ್ದಾಗ ಒಂದು ಬಸ್ ಅಗ್ನಿ ದುರಂತ ಆಗಿತ್ತು. ಆಗಲೂ ಎಲ್ಲಾ ಬಸ್‌ಗಳಿಗೆ ಕಡ್ಡಾಯ ಎಮರ್ಜೆನ್ಸಿ ಡೋರ್ ಮಾಡಿದ್ದೇವೆ. ಈಗಲೂ ಎಮರ್ಜೆನ್ಸಿ ಡೋರ್ ಕಡ್ಡಾಯ ಮಾಡಿದ್ದೇವೆ ಎಂದಿದ್ದಾರೆ.

Share.
Leave A Reply