ಬೆಂಗಳೂರು, ಜ.12: ಬೆಂಗಳೂರಿನಲ್ಲಿ ಬದುಕುತ್ತಿರುವ ಬಹುಜನರ ಜೀವನಾಡಿಯಾಗಿರುವ ʼನಮ್ಮ ಮೆಟ್ರೋʼ ಪ್ರಯಾಣಿಕರ ಪಾಲಿಗೆ ಮತ್ತಷ್ಟು ದುಬಾರಿಯಾಗಲಿದೆ. ಒಂದೆಡೆ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅನೇಕ ಜನ ಮೆಟ್ರೋ ಪ್ರಯಾಣವೇ ಬೆಸ್ಟ್ ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಮತ್ತೊಂದೆಡೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ ವರ್ಷವಷ್ಟೇ ಏರಿಕೆಯ ಶಾಕ್ ಕೊಟ್ಟಿದ್ದ ಬಿಎಂಆರ್ಸಿಎಲ್ ಇದೀಗ ಹೊಸ ವರ್ಷಕ್ಕೆ ಮತ್ತೆ ಟಿಕೆಟ್ ದರ ಹೆಚ್ಚಿಸಿ ಶಾಕ್ ಕೊಡಲು ಚಿಂತನೆ ನಡೆಸಿದೆ ಎನ್ನಲಾಗ್ತಿದೆ.
ಕಳೆದ ವರ್ಷ ಫೆಬ್ರವರಿ 2025ರಲ್ಲಿ ಮೆಟ್ರೋ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೂ ಸಹ ಕಾರಣವಾಗಿತ್ತು. ಆದರೆ, ದರ ನಿಗದಿ ಸಮಿತಿಯು ಮೆಟ್ರೋ ರೈಲುಗಳ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಪ್ರತಿ ವರ್ಷ ಗರಿಷ್ಠ ಶೇಕಡಾ 5ರಷ್ಟು ಸ್ವಯಂಚಾಲಿತ ದರ ಪರಿಷ್ಕರಣೆ ಮಾಡಲು ಶಿಫಾರಸು ಮಾಡಿದೆ. ಈ ಶಿಫಾರಸುಗಳು ಬಿಎಂಆರ್‌ಸಿಎಲ್‌ಗೆ ಕಾನೂನಾತ್ಮಕವಾಗಿ ಬದ್ಧವಾಗಿರುವುದರಿಂದ, ಪ್ರತಿ ವರ್ಷ ಫೆಬ್ರವರಿಯಲ್ಲಿ ದರ ಏರಿಕೆ ಅನಿವಾರ್ಯವಾಗಲಿದೆ.
ಈಗಾಗಲೇ ನಮ್ಮ ಮೆಟ್ರೋ ದೇಶದ ಅತ್ಯಂತ ದುಬಾರಿ ಮೆಟ್ರೋ ಸೇವೆ ಎಂಬ ಹಣೆಪಟ್ಟಿ ಹೊತ್ತಿದೆ. ಇಂತಹ ಸಮಯದಲ್ಲಿ ಮತ್ತೆ ದರ ಏರಿಕೆ ಮಾಡುತ್ತಿರುವುದು ದೈನಂದಿನ ಪ್ರಯಾಣಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಉದ್ಯೋಗಿಗಳಿಗೆ ದೊಡ್ಡ ಹೊರೆಯಾಗಲಿದೆ. ಸೇವೆಯ ಗುಣಮಟ್ಟ ಸುಧಾರಿಸದೆಯೇ ಪದೇಪದೆ ದರ ಹೆಚ್ಚಳ ಮಾಡುವುದು ನ್ಯಾಯವಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಂಬರುವ ಫೆಬ್ರವರಿಯಲ್ಲಿ ನೂತನ ದರ ಜಾರಿಯಾದ್ರೆ ಪ್ರಸ್ತುತ 100 ರೂ. ಇರುವ ಟಿಕೆಟ್ ದರ 105 ರೂ.ಗೆ ಏರಿಕೆಯಾಗಲಿದೆ. ಹಾಲಿ 60 ರೂ. ಇರುವ ದರವು ಪರಿಷ್ಕರಣೆಯ ನಂತರ 63 ರೂ. ಆಗುವ ಸಾಧ್ಯತೆಯಿದೆ. ಕನಿಷ್ಠ ದರ 10 ರೂ. ಹಾಗೆಯೇ ಉಳಿಯುವ ಸಾಧ್ಯತೆಯಿದ್ದರೂ ದೀರ್ಘ ಪ್ರಯಾಣದ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಕಂಡುಬರಲಿದೆ.
ಈ ದರ ಏರಿಕೆಯಿಂದಾಗಿ ಸುಮಾರು ಶೇ.5 ರಿಂದ 10ರಷ್ಟು ಪ್ರಯಾಣಿಕರು ಮೆಟ್ರೋದಿಂದ ಪರ್ಯಾಯ ಸಾರಿಗೆಯತ್ತ ಮುಖ ಮಾಡುವ ಸಾಧ್ಯತೆಯಿದ್ದು, ಇದು ನಗರದ ರಸ್ತೆಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
