ಹಾಸನ ಜಿಲ್ಲೆಯಲ್ಲಿ ವರುಣಾರ್ಭಟ ಜೋರಾಗಿದ್ದು, ಭಾರೀ ಮಳೆಗೆ ಹತ್ತಾರು ಕಡೆ ಅವಘಡಗಳು ಸಂಭವಿಸಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ (Shiradi Ghat) ಮಾರ್ಗದಲ್ಲಿ ಹಲವು ಕಡೆ ಗುಡ್ಡ ಕುಸಿದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಆನೆಮಹಲ್ ಬಳಿ ಹೆದ್ದಾರಿಯ ಬದಿಯ ಮಣ್ಣು ಕುಸಿದು ರಸ್ತೆಯೇ ಮಣ್ಣಿನಿಂದ ಆವೃತವಾಗಿದೆ. ಘಟನಾ ಸ್ಥಳಕ್ಕೆ ಎಸಿ ಶೃತಿ, ತಹಸೀಲ್ದಾರ್ ಅರವಿಂದ್ ಭೇಟಿ ನೀಡಿದ್ದು, ಮಣ್ಣು ತೆರವು ಕಾರ್ಯಾಚರಣೆಯನ್ನ ಕೈಗೊಂಡಿದ್ದಾರೆ. ಎರಡು ಬದಿಗಳಲ್ಲೂ ವಾಹನಗಳನ್ನು ತಡೆದು ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
Also Read: KSDL ಮೇಲೆ ಟೀಕೆ : ವಿಜಯೇಂದ್ರ ವಿರುದ್ಧ MB ಪಾಟೀಲ್ ಕಿಡಿ
ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಮಾರ್ಗವಾಗಿ ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದ್ದು, ಸದ್ಯ ರಸ್ತೆ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಕುಸಿಯುವ ಹಂತರದಲ್ಲಿರುವ ಮಣ್ಣು ಕೂಡ ಇಟಾಚಿ ಮೂಲಕ ಮಣ್ಣು ತೆರವು ಮಾಡಲಾಗ್ತಿದೆ.
ಎಡೆಬಿಡದೆ ಸುರಿದ ಮಳೆಯಿಂದ ಸಕಲೇಶಪುರದ ಬಸ್ ನಿಲ್ದಾಣ ಬಳಿ ಇರುವ ಹೋಟೆಲ್ ಮೇಲೆ ಗೋಡೆ ಕುಸಿದು ಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸಕಲೇಶಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
