Malnad ಭಾಗದಲ್ಲಿ ಭಾರೀ ಮಳೆಯಾಗ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ ಭಾಗದಲ್ಲಿ ಧಾರಾಕಾರ ಮಳೆಯಾಗ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ
ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ. ಬೇಲೂರು-ಸಕಲೇಶಪುರ ರಾಜ್ಯ ಹೆದ್ದಾರಿಯ ಅರೇಹಳ್ಳಿ ಗ್ಯಾಸ್ ಗೋಡನ್ ಬಳಿ ಈ ಘಟನೆ ನಡೆದಿದ್ದು, ವಾಹನ ಸವಾರರು ಆತಂಕದಲ್ಲೇ ಸಂಚಾರ ಮಾಡುತ್ತಿದ್ದಾರೆ.
ಬಿರುಗಾಳಿ ಸಹಿತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಪರದಾಡ್ತಿದ್ದಾರೆ. ಇನ್ನು ಸಕಲೇಶಪುರದಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬೃಹತ್ ಮರಗಳು ಧರಶಾಹಿಯಾಗಿವೆ. ಇಲ್ಲಿನ ಹಳೇಸಂತೆವೇರಿ ರಸ್ತೆಗೆ ಬೃಹತ್ ಮರ ಅಡ್ಡಲಾಗಿ ಬಿದ್ದಿದ್ದು, ಅಲ್ಲೆ ಇದ್ದ ವಾಹನಗಳು ಜಖಂಗೊಂಡಿವೆ.
Also Read: ಹಾಸನದಲ್ಲಿ ವರುಣಾರ್ಭಟ : Shiradi Ghat ಹಲವೆಡೆ ಗುಡ್ಡ ಕುಸಿತ
ಇಷ್ಟೇಅಲ್ಲದೇ ಬಾಗೆ-ಬೇಲೂರು ರಾಜ್ಯ ಹೆದ್ದಾರಿಯಲ್ಲಿ ವಿದ್ಯುತ್ ತಂತಿ ಮೇಲೆ ಮರಬಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡ್ತಿದ್ದಾರೆ. ಹೆಗ್ಗೊವೆ ಗ್ರಾಮದಲ್ಲಿ ಕಾಫಿ ತೋಟದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದಿದ್ದು, ಹೆಗ್ಗೊವೆ ಗ್ರಾಮದ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತವಾಗಿದೆ.
