ಇತ್ತೀಚೆಗಷ್ಟೇ ರೈಸಿಂಗ್ ಸ್ಟಾರ್ಸ್ಟ್ ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಆಟಗಾರ ವೈಭವ್ ಸೂರ್ಯವಂಶಿ(Vaibhav Suryavanshi) ಈಗ ಮತ್ತೊಮ್ಮೆ ಮಿಂಚಿದ್ದಾರೆ.
ಟಿ20 ಕ್ರಿಕೆಟ್ ದೇಶೀಯ ಅಂಗಳದಲ್ಲಿ ಈಗ ವೈಭವ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ಸಿಡಿಸಿದ್ದಾರೆ. ಮಹಾರಾಷ್ಟ್ರ ತಂಡದ ನಾಯಕ ಪೃಥ್ವಿ ಶಾ ಟಾಸ್ ಗೆದ್ದು ಬಿಹಾರ ವಿರುದ್ಧ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಬಿಹಾರ ದಾಂಡಿಗ ವೈಭವ್ ಸೂರ್ಯವಂಶಿ ಆರಂಭದಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿ, ನಂತರ ಬೌಲ್ ನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು.
ಅರ್ಧಶತಕ ಪೂರೈಸಲು 34 ಎಸೆತಗಳನ್ನು ತೆಗೆದುಕೊಂಡಿದ್ದ ವೈಭವ್, 58 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಮಹಾರಾಷ್ಟ್ರದ ಅನುಭವಿ ಬೌಲರ್ ಗಳು ಕೂಡ ವೈಭವ್ ವಿರುದ್ಧ ಮಂಡಿಯೂರುವಂತಾಯಿತು. ಅಲ್ಲದೇ, 61 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್, 7 ಫೋರ್ಗಳೊಂದಿಗೆ ಅಜೇಯ 108 ರನ್ ಗಳಿಸಿದರು. ಹೀಗಾಗಿ ವೈಭವ್ ಶತಕದ ನೆರವಿನಿಂದಾಗಿ ಬಿಹಾರ ತಂಡ 20 ಓವರ್ಗಳಲ್ಲಿ 176 ರನ್ ಗಳಿಸಿದೆ.
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ 32 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಕೇವಲ 42 ಎಸೆತಗಳನ್ನು ಎದುರಿಸಿದ ವೈಭವ್ ಅಂತಿಮವಾಗಿ 15 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 144 ರನ್ ಗಳಿಸಿದ್ದರು.
