ನ್ಯಾಷನಲ್ ಹೆರಾಲ್ಡ್ ಪ್ರಕರಣ (National Herald Case) ಮತ್ತೆ ಮುನ್ನಲೆಗೆ ಬಂದಿದೆ. ಭಾರೀ ಸದ್ದು ಮಾಡಿದ್ದ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಇದೀಗ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಮಾಜಿ ಸಂಸದ ಡಿಕೆ ಸುರೇಶ್ (DK Suresh)​ ಬುಡಕ್ಕೆ ಬಂದು ನಿಂತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಂಟಕವಾಗಿರುವ ನ್ಯಾಷನಲ್ ಹೆರಾಲ್ಡ್​​ ಕೇಸ್​ನಲ್ಲಿ ಈಗ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ ಸುರೇಶ್ ಅವರ ಹೆಸರು ಥಳುಕು ಹಾಕಿಕೊಂಡಿದೆ.

ಯಂಗ್ ಇಂಡಿಯಾ ಲಿಮಿಟೆಡ್‌ಗೆ ಡಿ.ಕೆ ಬ್ರದರ್ಸ್ ದೇಣಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯಾಷನಲ್ ಹೆರಾಲ್ಡ್ ಆಸ್ತಿಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ ಯಂಗ್ ಇಂಡಿಯಾ ಲಿಮಿಟೆಡ್‌ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ನಿರ್ದೇಶಕರಾಗಿದ್ದಾರೆ. ಈ ಯಂಗ್ ಇಂಡಿಯಾ ಲಿಮಿಟೆಡ್‌ಗೆ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಅವರು ದೇಣಿಗೆ ನೀಡಿದ್ದಾರೆ. ಈ ಸಂಬಂಧ ಡಿಕೆ ಬ್ರದರ್ಸ್​ಗೆ ಇಡಿ ಸಂಕಷ್ಟ ಎದುರಾಗುವಾಗ ಸಾಧ್ಯತೆಗಳಿವೆ. ಇನ್ನು ಫಂಡ್​ ನೀಡಿರುವ ಬಗ್ಗೆ ಡಿಕೆಶಿ ಹಾಗೂ ಸುರೇಶ್​ ಒಪ್ಪಿಕೊಂಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್, ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಗೆ ನಾವು 50 ಲಕ್ಷ ರೂ. ಹಣ ಕೊಟ್ಟಿದ್ದೇವೆ. ನಾನು 25 ಲಕ್ಷ, ನನ್ನ ತಮ್ಮ ಡಿ.ಕೆ.ಸುರೇಶ್ 25 ಲಕ್ಷ ಕೊಟ್ಟಿದ್ದಾನೆ. ನಮ್ಮ ಪಕ್ಷ ನಡೆಸುತ್ತಿದ್ದ ಪತ್ರಿಕೆಗೆ ದೇಣಿಗೆ ಕೊಟ್ಟರೆ ತಪ್ಪೇನು? ಟ್ರಸ್ಟ್ ವತಿಯಿಂದಲೂ ನ್ಯಾಷನಲ್ ಹೆರಾಲ್ಡ್​ಗೆ ದೇಣಿಗೆ ನೀಡಿದ್ದೇವೆ. ನಾವೇನು ಕದ್ದು ದೇಣಿಗೆ ಕೊಟ್ಟಿದ್ದೀವಾ? ಸಂಪಾದನೆ ಮಾಡಿದ ಆಸ್ತಿಯಿಂದ ರಾಜಾರೋಷವಾಗಿಯೇ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್​ ಪ್ರತಿಕ್ರಿಯಿಸಿ, ಯಂಗ್ ಇಂಡಿಯಾ ಟ್ರಸ್ಟ್ ಗೆ ಹಣ ಕೊಟ್ಟಿದ್ದೇವೆ. ಎರಡು, ಎರಡೂವರೆ ಕೋಟಿ ರೂ. ಹಣ ಕೊಟ್ಟಿದ್ದೇವೆ. ಈ ಸಂಬಂಧ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ. ನಾವು ಕೊಟ್ಟಿಲ್ಲ ಅಂತ ಹೇಳುತ್ತಿಲ್ಲ. ದುರುದ್ದೇಶ ಪೂರ್ವಕವಾಗಿ ಆರೋಪ ಮಾಡುತ್ತಿದ್ದು, ನಮ್ಮ‌ ಕಾಂಗ್ರೆಸ್ ನಾಯಕರ‌ ಮೇಲೆ‌ ಹೊರಿಸುವ ಪ್ರಯತ್ನ ಚಾರ್ಜ್‌ಶೀಟ್ ನಲ್ಲಿ ಮಾಡಿದ್ದಾರೆ.

ನಾವು ಕಾನೂನಾತ್ಮಕವಾಗಿ‌ ಹೋರಾಟ ಮಾಡುತ್ತೇವೆ. ಇದು ರಾಜಕೀಯ ಪೂರಿತವಾದ ಪ್ರಕರಣ. ಸೋನಿಯಾ ಗಾಂಧಿಯವರ ಟ್ರಸ್ಟ್ ಅಲ್ಲ. ಯಂಗ್ ಇಂಡಿಯಾ ಸಂಸ್ಥೆಗೆ ಕೊಟ್ಟಿರೋದು. ಅವರು ವೈಯುಕ್ತಿಕವಾಗಿ ಹಣ ಬಳಸಿಕೊಂಡಿಲ್ಲ. ಅದು‌ ಟ್ರಸ್ಟ್ ಗೆ ಬಳಕೆಯಾಗಿದೆ. ಇಡಿಯವರಿಗೂ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಇದರಲ್ಲಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದರು.

Also Read: DKS vs HDK: ‘ಎಚ್‌ಡಿ ಕುಮಾರಸ್ವಾಮಿಗೆ ಮೆಂಟ್ಲು, ಹೆಚ್ಚು ಕಮ್ಮಿ ಆಗಿರಬೇಕು’ – ಡಿಕೆಶಿ

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸಿದ್ದ ಇಡಿ ಅಧಿಕಾರಿಗಳು , ದೇಣಿಗೆ ನೀಡಿದ್ದ ಮೂಲವನ್ನು ಕೆದಕಿದ್ದು, ಈ ಸಂಬಂಧ 2022ರ ನವೆಂಬರ್ ನಲ್ಲಿ ಡಿಕೆ ಸರೇಶ್ ಅವರನ್ನು ವಿಚಾರಣೆಗೊಳಪಡಿಸಿತ್ತು. ಎರಡು ದಿನಗಳ ವಿಚಾರಣೆ ವೇಳೆ ಡಿಕೆ ಸುರೇಶ್ ಸಹ ದೇಣಿಗೆ ನೀಡಿದ ಹಣದ ಮೂಲದ ದಾಖಲೆಗಳನ್ನು ಇಡಿ ಮುಂದಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಈ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ಚಾರ್ಜ್​ಶೀಟ್​ನಲ್ಲಿ ಇಡಿ ಅಧಿಕಾರಿಗಳು, ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೆಸರು ಉಲ್ಲೇಖ ಮಾಡಿದ್ದಾರೆ.

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಂದಲೂ ಯಂಗ್ ಇಂಡಿಯಾ ಲಿಮಿಟೆಡ್‌ಗೆ ದೇಣಿಗೆ ನೀಡಲಾಗಿದೆ ಎನ್ನಲಾಗಿದೆ. ರೇವಂತ್ ರೆಡ್ಡಿ ಅವರು ದೇಣಿಗೆ ನೀಡುವುದಲ್ಲದೇ, ಬೇರೆ 4 ನಾಯಕರಿಗೆ 80 ಲಕ್ಷ ರೂಪಾಯಿ ದೇಣಿಗೆ ನೀಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು 142 ಕೋಟಿ ರೂಪಾಯಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ED (ಜಾರಿ ನಿರ್ದೇಶನಾಲಯ) ಹೇಳಿದೆ. ಯಂಗ್ ಇಂಡಿಯಾ ಲಿಮಿಟೆಡ್ ಕಂಪನಿಗೆ ತೆಗೆದುಕೊಂಡಿರುವ ದೇಣಿಗೆ ಸದುದ್ದೇಶ ಹೊಂದಿಲ್ಲ ಎನ್ನಲಾಗಿದೆ. ಈ ಎಲ್ಲಾ ಅಂಶಗಳನ್ನು ED (ಜಾರಿ ನಿರ್ದೇಶನಾಲಯ) ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

Share.
Leave A Reply