ಕಲಬುರಗಿ: ರಾಜ್ಯದಲ್ಲಿ ಕುರ್ಚಿ ಬದಲಾವಣೆ ಬಗ್ಗೆ ಹೈಕಮಾಂಡ್ (HighCommand) ಯಾವುದೇ ಗೊಂದಲ ಸೃಷ್ಟಿಸಿಲ್ಲ. ತಾವೇ ಸೃಷ್ಟಿ ಮಾಡಿಕೊಂಡಿದ್ದಾರೆ. ಎಲ್ಲದಕ್ಕೂ ಹೈಕಮಾಂಡ್ ಅಂದ್ರೆ ಹೇಗೆ ಎಂದು ಕಿಡಿಕಾರಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಲೋಕಲ್ ನವರೇ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಸಿಎಂ ಸ್ಥಾನದ ಅಧಿಕಾರ ಹಂಚಿಕೆ ಬಗ್ಗೆ ಸಿದ್ದರಾಮಯ್ಯ ಬಣ ಹಾಗೂ ಡಿಕೆಶಿ ಬಣಗಳ ಮಧ್ಯೆ ಗುದ್ದಾಟ ನಡೆಯುತ್ತಲೇ ಇದೆ. ಈ ಮಧ್ಯೆ ಎಲ್ಲರೂ ಹೈಕಮಾಂಡ್…ಹೈಕಮಾಂಡ್ ಎಂದು ಮಾತನಾಡುತ್ತಿದ್ದಾರೆ. ಡಿ. 23ಕ್ಕೆ ದೆಹಲಿಗೆ ಹೊರಟಿದ್ದೇನೆ. ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಇಬ್ಬರಿಗೂ ಹೈಕಮಾಂಡ್ ಬರಲು ಹೇಳಿದೆ ಎಂದು ಡಿಕೆಶಿ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಈಗ ಮಲ್ಲಿಕಾರ್ಜುನ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲದಕ್ಕೂ ಹೈಕಮಾಂಡ್ ಅಂದರೆ ಹೇಗೆ? ಅವರಿಂದ ಪಕ್ಷ ಅಧಿಕಾರಕ್ಕೆ ಬಂತು..ಇವರಿಂದ ಪಕ್ಷ ಅಧಿಕಾರಕ್ಕೆ ಬಂತು ಅಂತಾ ಯಾರೂ ಹೇಳುವಂತಿಲ್ಲ. ಕಾರ್ಯಕರ್ತರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಅಧಿಕಾರ ಹಂಚಿಕೆ ವಿಷಯದಲ್ಲಿ ಹೈಕಮಾಂಡ್ ಯಾವುದೇ ಗೊಂದಲ ಮಾಡಿಲ್ಲ. ಇಲ್ಲಿನ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
