ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಸೌಜನ್ಯ ಕೇಸಿನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಲಾಗಿದೆ. ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ಇವೆ. ಇದಲ್ಲದೇ ದ್ವೇಷ ಭಾಷಣ ಹಿನ್ನೆಲೆಯಲ್ಲಿ ತಿಮರೋಡಿಯನ್ನು ಗಡಿಪಾರು ಮಾಡುವಂತೆ ಒತ್ತಾಯ ಹೆಚ್ಚಾಗಿತ್ತು. ಈ ಮನವಿಗಳನ್ನು ಪುರಸ್ಕರಿಸಿದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಸೆಪ್ಟೆಂಬರ್ 20ರಂದೇ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಆದ್ರೆ, ಇನ್ನೂ ಕೂಡ ಗಡಿಪಾರು ಪ್ರಕ್ರಿಯೆ ನಡೆದಿಲ್ಲ.

ಯಾಕಂದ್ರೆ ಗಡಿಪಾರು ನೋಟಿಸ್ ಅನ್ನು ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಗೆ ನೀಡಬೇಕು. ಅದಾದ ಮೇಲೆ ಗಡಿಪಾರು ಪ್ರಕ್ರಿಯೆ ನಡೆಯುತ್ತದೆ. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧವೂ ಸಹ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದರು. ಇದೀಗ ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗಡಿಪಾರು ಮಾಡುವಂತೆ ಒತ್ತಾಯಗಳು ಕೇಳಿ ಬಂದಿದ್ವು..
