ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿಗಾಗಿ ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಹರಾಜಿನಲ್ಲಿ ಬರೋಬ್ಬರಿ 369 ಆಟಗಾರರ ಹೆಸರು ಕಾಣಿಸಿಕೊಂಡಿದೆ. ಇವರಲ್ಲಿ ಎರಡನೇ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಸ್ಟಾರ್ ಆಲ್​ರೌಂಡರ್​ನನ್ನು ಖರೀದಿಸಿದೆ. ಆರ್‌ಸಿಬಿ ಫ್ರಾಂಚೈಸಿಯು ಭಾರತದ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂಪಾಯಿ ನೀಡಿ ಖರೀದಿಸಿ, ಈ ಮೂಲಕ ಕಡಿಮೆ ಮೊತ್ತಕ್ಕೆ ಒಳ್ಳೆಯ ಆಲ್ರೌಂಡರ್ ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗದೆ. ಕಳೆದ ಆವೃತ್ತಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬರೋಬ್ಬರಿ 23.75 ಕೋಟಿ ರೂಪಾಯಿ ನೀಡಿ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಿತ್ತು. ಇದೀಗ ಮತ್ತೊಮ್ಮೆ ವೆಂಕಟೇಶ್ ಅಯ್ಯರ್ ಖರೀದಿಸಲು ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಪೈಪೋಟಿ ಏರ್ಪಟ್ಟಿತ್ತಾದರೂ, ಅಂತಿಮವಾಗಿ 7 ಕೋಟಿ ರೂಪಾಯಿಗೆ ವೆಂಕಟೇಶ್ ಅಯ್ಯರ್‌ ಆರ್‌ಸಿಬಿ ಪಾಲಾಗಿದ್ದಾರೆ.

ಇನ್ನು, 30 ಲಕ್ಷ ರೂಪಾಯಿ ಮೂಲಬೆಲೆ ಹೊಂದಿದ್ದ ಮಂಗೇಶ್ ಯಾದವ್‌ರನ್ನು ಖರೀದಿಸಲು ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಪೈಪೋಟಿ ನಡೆಸಿದವು. ಮಧ್ಯಪ್ರದೇಶ ತಂಡದ ಪರ ಕೇವಲ 2 ಪಂದ್ಯ ಆಡಿರುವ ಎಡಗೈ ವೇಗಿ ಮಂಗೇಶ್ ಯಾದವ್‌ ಅವರನ್ನು ಆರ್‌ಸಿಬಿ ತಂಡ 5.2 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ. ಇದೇ ವೇಳೆ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ಅವರನ್ನು ಆರ್‌ಸಿಬಿಯೂ ಮೂಲಬೆಲೆ 2 ಕೋಟಿ ರೂಪಾಯಿಗೆ ಖರೀದಿಸಿದೆ. ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ತೋರಿಸುತ್ತಿರುವ 31 ವರ್ಷದ ಬಲಗೈ ವೇಗಿ ಜಾಕೋಬ್ ಡಫಿ, ಸದ್ಯ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ನಂಬ‌ರ್ 2 ಬೌಲರ್ ಆಗಿದ್ದಾರೆ. ಐಪಿಎಲ್‌ ಮಿನಿ ಹರಾಜಿನಲ್ಲಿ ₹2 ಕೋಟಿ ಮೂಲಬೆಲೆ ಹೊಂದಿದ್ದ ಜಾಕೋಬ್ ಡಫಿ ಅವರನ್ನು ಆರ್‌ಸಿಬಿ ಹೊರತುಪಡಿಸಿ ಯಾವ ತಂಡಗಳು ಕೂಡ ಖರೀದಿಸಲು ಮುಂದೆ ಬರಲಿಲ್ಲ. ಹಾಗಾಗಿ ಮೂಲಬೆಲೆಗೆ ಅವರು ಆರ್‌ಸಿಬಿ ಪಾಲಾಗಿದ್ದಾರೆ.

Share.
Leave A Reply