ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್​ಗೆ 371 ರನ್ ಗಳ ಬೃಹತ್ ಗುರಿ ನೀಡಿತ್ತು. ಪಂದ್ಯದ ಐದನೇ ದಿನದಂದು ಇಂಗ್ಲೆಂಡ್ ಗೆಲುವಿಗೆ 350 ರನ್​ಗಳು ಬೇಕಾಗಿದ್ದವು. ಇಂಗ್ಲೆಂಡ್ ತಂಡದ ಗೆಲುವಿಗೆ ಆರಂಭಿಕರಾಗಿ ಬಂದ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ 188 ಹೆಚ್ಚು ರನ್​ಗಳ ಅದ್ಭುತ ಜೊತೆಯಾಟವನ್ನಾಡಿ ತಂಡದ ಗೆಲುವನ್ನು ಖಚಿತಪಡಿಸಿದರು.

ಬೆನ್ ಡಕೆಟ್ ಶತಕ ಗಳಿಸಿದರೆ, ಕ್ರೌಲಿ 65 ರನ್ ಗಳಿಸಿ ಔಟಾದರು. ಕ್ರೌಲಿ ಔಟಾದ ನಂತರ ಬಂದ ಓಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಆದರೆ ಇದಾದ ನಂತರ ನಾಯಕ ಬೆನ್ ಸ್ಟೋಕ್ಸ್, ಜೋ ರೂಟ್ ಜೊತೆ ಅರ್ಧಶತಕದ ಪಾಲುದಾರಿಕೆ ಮಾಡಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು.

ಉಳಿದಂತೆ ಮಾಜಿ ನಾಯಕ ಜೋ ರೂಟ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.ಇನ್ನು ಲೀಡ್ಸ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಅದ್ಭುತ ಬ್ಯಾಟಿಂಗ್ ಮಾಡಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು.

ಎರಡನೇ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ, ಸ್ಟ್ರೈಕ್ ಬೌಲರ್‌ಗಳಾದ ಬುಮ್ರಾ ಮತ್ತು ಸಿರಾಜ್ ಇಬ್ಬರೂ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದರಾದರೂ ರನ್​ಗಳಿಗೆ ಕಡಿವಾಣ ಹಾಕಲಿಲ್ಲ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು 6 ಕ್ಯಾಚ್‌ಗಳನ್ನು ಕೈಬಿಟ್ಟಿತು. ಅದರಲ್ಲೂ ಯಶಸ್ವಿ ಜೈಸ್ವಾಲ್ ಒಬ್ಬರೇ ಪಂದ್ಯದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟರು. ಇದರ ಪರಿಣಾಮವಾಗಿ ಟೀಂ ಇಂಡಿಯಾಕ್ಕೆ ಹೀನಾಯ ಸೋಲು ಎದುರಾಯಿತು..

Share.
Leave A Reply