ಈಕೆ ಅದ್ಯಾವ ಸೀಮೆ ರಾಕ್ಷಸಿ ನೋಡಿ.. ದೆವ್ವ ಬಂದಿದೆ ಅಂತಾ ಮಹಿಳೆ ಮೇಲೆ ನಿರಂತರವಾಗಿ ಹಲ್ಲೆ ಮಾಡ್ತಿದ್ದಾಳೆ. ಕೈಯಲ್ಲಿ ಕೋಲು ಹಿಡಿದು ಎತ್ತ ತಿರುಗಿದರತ್ತ ಬಾರಿಸುತ್ತಿದ್ದಾಳೆ. ಪ್ರತಿ ನಿಮಿಷಕ್ಕೆ 36 ಬಾರಿಯಂತೆ ನಿರಂತವಾಗಿ 5 ಗಂಟೆಗಳ ಕಾಲ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಇದ್ರ ಪರಿಣಾಮ ಹೇಗಾಗಿದೆ ಅಂದ್ರೆ ಏಟು ತಿಂದ ಮಹಿಳೆ ನಿತ್ರಾಣಗೊಂಡು ಜೀವ ಬಿಟ್ಟಿದ್ದಾಳೆ.
ಇಂಥಾದ್ದೊಂದು ವಿಕೃತ, ವಿಚಿತ್ರ ಘಟನೆ ನಡೆದಿದ್ದು ಮಲೆನಾಡಿನಲ್ಲಿ. ಭದ್ರಾವತಿ ತಾಲೂಕಿನ ಜಂಬರಗಟ್ಟೆ ಗ್ರಾಮದ 45 ವರ್ಷದ ಗೀತಮ್ಮ ಜೀವ ಬಿಟ್ಟಿದ್ದಾರೆ. ದೆವ್ವ ಅಂಟಿಕೊಂಡಿದೆ, ಬಿಡಿಸುತ್ತೇನೆಂದು ಹೇಳಿ ಚಿತ್ರಹಿಂಸೆ ನೀಡಿದ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಸಾವನ್ನಪ್ಪಿದ್ದಾರೆ. ತಾಯಿಗೆ ಹುಷಾರಿಲ್ಲದ ಹಿನ್ನೆಲೆ ಮಗನೇ ದೆವ್ವ ಬಿಡಿಸಲು ಹೊಸ ಜಂಬರಘಟ್ಟಕ್ಕೆ ಕರೆದುಕೊಂಡು ಹೋಗಿದ್ದ. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗೀತಮ್ಮನನ್ನು ದೆವ್ವ ಹಿಡಿದಿದೆ ಎಂದು ಕರೆದುಕೊಂಡು ಹೋಗಿದ್ದ.
ಗೀತಮ್ಮಗೆ ಮನಸೋ ಇಚ್ಛೆ ಥಳಿಸಿದ ರಾಕ್ಷಸಿ
ಭಾನುವಾರ ರಾತ್ರಿ 9.30ರ ಸುಮಾರಿಗೆ ಗೀತಮ್ಮನ ಮನೆಗೆ ಬಂದ ಆಶಾ ಎಂಬ ಮಹಿಳೆ, ಮಂಕಾಗಿದ್ದ ಗೀತಮ್ಮಳಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸುವುದಾಗಿ ಗೀತಮ್ಮಳ ಮಗನ ಬಳಿ ಹೇಳಿದ್ದಾಳೆ. ಆಗ ಮಗ ಸಂಜಯ್ ತನ್ನ ತಾಯಿ ಚನ್ನಾಗಿ ಆಗಿ ಲವಲವಿಕೆಯಿಂದ ಇದ್ದರೆ ಸಾಕು ಅಂತಾ ನಂಬಿ ಆಶಾಳ ಮಾತಿಗೆ ಒಪ್ಪಿಕೊಂಡು ದೆವ್ವ ಬಿಡಿಸಲು ಒಪ್ಪಿಕೊಂಡಿದ್ದಾನೆ.
ನಂತರ ಆಶಾ ನನ್ನ ಮೇಲೆ ಚೌಡಮ್ಮ ಬಂದಿದ್ದಾಳೆ ಅಂತಾ ಗೀತಮ್ಮಳ ಮೇಲಿನ ದೆವ್ವ ಬಿಟ್ಟು ಹೋಗು ಎಂದು ಕೋಲಿನಿಂದ ಹೊಡೆಯೋಕೆ ಶುರು ಮಾಡಿದ್ದಾಳೆ. ದೆವ್ವ ಹೋಗಿಲ್ಲ ಅಂತಾ ರಾತ್ರಿ 9.30ಕ್ಕೆ ಮನೆಯಿಂದ ಎರಡೂವರೆ ಕಿಲೋಮೀಟರ್ ದೂರ ಇರೋ ಹಳೇ ಜಂಭರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ತಲೆ ಮೇಲೆ ಕಲ್ಲು ಹೊರಿಸಿ ಹೊಡೆದುಕೊಂಡೇ ಹೋಗಿದ್ದಾಳೆ.. ಆದರೂ ದೆವ್ವ ಹೋಗ್ತಿಲ್ಲ ಅಂತಾ ಬೆಳಗಿನ ಜಾವ 2.30ರವರೆಗೂ ಥಳಿಸೋದನ್ನು ಬಿಟ್ಟಿಲ್ಲ.
ಕೂಗಾಟ ರಂಪಾಟ ಕೇಳಿ, ಜನರು ಓಡೋಡಿ ಬಂದಿದ್ದಾರೆ. ಪೂಜೆ ನಡೆಯುತ್ತಿದೆ ಅಂತಾ ಅವರನ್ನು ವಾಪಸ್ ಕಳಿಸಿದ್ದಾರೆ.. ಆನಂತರ ಗೀತಮ್ಮನ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲು ಹೊರಿಸಿ ಕಾಲುವೆಯಲ್ಲಿದ್ದ ತಣ್ಣೀರೆರಚಿದ್ದಾರೆ. ಚಳಿ ತಾಳಲಾಗದೇ ನಡುಗುತ್ತಿದ್ದ ಗೀತಮ್ಮ ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ. ಗೀತಮ್ಮನ ಮೈಯಲ್ಲಿದ್ದ ಆತ್ಮ ಹೋಗಿದೆ ಇನ್ನು ಮುಂದೆ ಯಾವುದೇ ತೊಂದರೆ ಇಲ್ಲ ಅಂತಾ ಗೀತಮ್ಮನನ್ನು ಆಶಾ ಮನೆಗೆ ಕಳಿಸಿದ್ದಾಳೆ.
ಮಹಿಳೆ ಥಳಿಸುವ ವಿಡಿಯೋ ವೈರಲ್
ಆ ನಂತ್ರ ತೀವ್ರ ಅಸ್ವಸ್ಥಗೊಂಡಿದ್ದ ಗೀತಮ್ಮನನ್ನ ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗೀತಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ದೃಢ ಪಡಿಸಿದ್ದಾರೆ. ಸದ್ಯ ಮಹಿಳೆ ಥಳಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿವೆ. ಸದ್ಯ ಮೃತಳ ಮಗ ಸಂಜಯ್ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಆಶಾಳನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
