ಕಾಡಾನೆ ಕಾರ್ಯಾಚರಣೆ ವೇಳೆ ಹಿಂಡಿನಲ್ಲಿದ್ದ ಆನೆಯೊಂದಕ್ಕೆ ವಿದ್ಯುತ್ ಸ್ಪರ್ಶಿಸಿದ ಘಟನೆ ಕೊಂಡಗೇರಿ ಗ್ರಾಮದಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಕೈಗೊಂಡಿದ್ದು, ಕೊಂಡಗೇರಿ ಭಾಗದಲ್ಲಿ ಬೀಡುಬಿಟ್ಟಿದ್ದ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳಿರುವ ಹಿಂಡನ್ನು ಪಟಾಕಿ ಸಿಡಿಸಿ, ಅರಣ್ಯದತ್ತ ಓಡಿಸಲಾಗುತ್ತಿತ್ತು. ಈ ವೇಳೆ ಕಾಡಾನೆ ಹಿಂಡು ರಸ್ತೆ ದಾಟುವಾಗ ಸಮೀಪದಲ್ಲಿದ್ದ ಅಡಿಕೆ ಮರವೊಂದು ಮುರಿದು ಬಿದ್ದು, ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ತಂತಿ ತುಂಡಾಗಿದೆ.
ಇದೇ ವೇಳೆ ಹಿಂಡಿನಲ್ಲಿದ್ದ ಆನೆಯೊಂದಕ್ಕೆ ಸ್ಪರ್ಶಿಸಿದೆ. ಆನೆ ಮರಿ ನೆಲಕ್ಕೆ ಬಿದ್ದಿದ್ದು, ತಕ್ಷಣವೇ ಅದನ್ನು ಸೊಂಡಿಲಿನಿಂದ ಎತ್ತಿದ ಇತರ ಆನೆಗಳು ರಸ್ತೆ ದಾಟಿ ಮುಂದೆ ಹೋಗಿವೆ. ಅಮ್ಮತ್ತಿ ಕಾವಾಡಿ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ 15 ಕ್ಕೂ ಹೆಚ್ಚು ಕಾಡಾನೆಗಳಿದ್ದ ಹಿಂಡನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದು, ಪುಲಿಯೇರಿ ಗ್ರಾಮದವರೆಗೆ ಓಡಿಸಲಾಗಿದೆ. ಕಾಡಾನೆಗಳು ಪುಲಿಯೇರಿ ಗ್ರಾಮದ ಸ್ಕೂಲ್ ಎಸ್ಟೇಟ್ ನಲ್ಲಿ ಬೀಡುಬಿಟ್ಟಿದ್ವು. ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ, ಆರ್.ಆರ್.ಟಿ, ಆನೆ ಕಾರ್ಯಪಡೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
