ಬುರುಡೆ ಗ್ಯಾಂಗ್, ಶ್ರೀ ಕ್ಷೇತ್ರದ ವಿರುದ್ಧದ ಷಡ್ಯಂತ್ರದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮೌನ ಮುರಿದಿದ್ದಾರೆ. ಸೌಜನ್ಯ ಕೇಸ್ನಿಂದ ತಲೆಬುರುಡೆ ಕೇಸ್ನವರೆಗೆ ಅನೇಕರು ಡಾ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ಕಡೆಗೆ ಬೆರಳು ಮಾಡುತ್ತಿದ್ದರು. ದೇಹ ಹೂತಿಟ್ಟ ಕೇಸ್ನಲ್ಲಿ ಧರ್ಮಸ್ಥಳದ ಬಗ್ಗೆ ಅನೇಕರು ಅಪಪ್ರಚಾರ ಮಾಡಿದ್ದು, SIT ರಚನೆಯಿಂದಾಗಿ ಸತ್ಯ ಹೊರಬರುತ್ತಿದೆ. ಈ ಕುರಿತಾಗಿ ಮಾತನಾಡಿರುವ ಡಾ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆಯಿಂದ ಸತ್ಯಾಂಶ ಹೊರಬರುತ್ತಿದೆ ಅಂತಾ ಹೇಳಿದ್ದಾರೆ. ತಮ್ಮ ಮೇಲಿನ ದ್ವೇಷಕ್ಕೆ ಕಾರಣವೇನೆಂದು ಪ್ರಶ್ನಿಸಿರುವ ಅವರು, ನಿಷ್ಪಕ್ಷಪಾತ ತನಿಖೆ ನಡೆಸುತ್ತಿರುವ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಸತ್ಯದ ಹಾದಿಯಲ್ಲಿರುವುದರಿಂದ ತಮಗೆ ಆತ್ಮವಿಶ್ವಾಸವಿದೆ ಎಂದಿದ್ದಾರೆ.

ಧರ್ಮಸ್ಥಳ ಬೇರೆ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ಅಂತ ನೀವು ನೋಡಿದ್ದೀರಿ. ಯಾಕೆ ಇಷ್ಟು ದ್ವೇಷ ನನ್ನ ಮೇಲೆ ಇದೆ ಅಂತ ನನಗೆ ಗೊತ್ತಾಗಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ. ನಮ್ಮ ಮೇಲೆ ದೃಢವಾದ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿ. ಈಗಾಗಲೇ ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋಗಿದ್ದಾರೆ. ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತ ಹಾಗೆ ಅಂತ ಹೇಳಿದ್ದಾರೆ. ಈ ಶತ್ರುತ್ವ ಯಾಕೆ, ನಾವು ಯಾರನ್ನೂ ಹಿಯಾಳಿಸಿಲ್ಲ. ದ್ವೇಷ ಕೂಡ ಮಾಡಿಲ್ಲ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸ ಇದೆ ಅಂತಾ ಹೇಳಿದರು. ಬೆಂಗಳೂರು ಅಥವಾ ಎಲ್ಲೋ ಕೂತು ಟೀಕೆ ಮಾಡೋರು ನಮಗೆ ಬೇಡ. ನಮಗೆ ನಮ್ಮವರು ಬೇಕು, ನಮ್ಮ ಜೊತೆ ನಿಲ್ಲೋರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಣುಮಕ್ಕಳಿಗೂ ನಾನು ಆಭಾರಿ. ಎಸ್ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯವಾಗಿ ಮಾತನಾಡುತ್ತಿದ್ದೇನೆ. ನಮ್ಮ ಹೊಳಪು ಹಾಗೇ ಉಳಿದಿದೆ. ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೋಡಿಕೊಳ್ಳುತ್ತಾರೆ. ನಾವು ಸತ್ಯದಿಂದ ಇದ್ದೇವೆ. ಹಾಗೆಯೇ ಮುಂದೆಯೂ ಇರುತ್ತೇವೆ. ಮುಂದಿನ ದಿನಗಳು ಉತ್ತಮವಾಗಿರಲಿ, ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
Read Also : ಮುಟ್ಟಿದರೆ ಮುನಿ ಆರೋಗ್ಯಕ್ಕೆ ಸಂಜೀವಿನಿ! : ಅಸಂಖ್ಯಾತ ಪ್ರಯೋಜನಗಳಿಂದ ಕೂಡಿದೆ ಮುಟ್ಟಿದರೆ ಮುದುಡುವ ಈ ಸಸ್ಯ!