ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನದ ಫೈಟ್ ‘ತಿಂಡಿ’ ಕೂಟವಾಗುತ್ತಿದೆ. ಈ ಮೂಲಕ ಮುಸುಕಿನ ಗುದ್ದಾಟಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ಸಿಎಂ ನಿವಾಸದಲ್ಲಿ ಆಯೋಜಿಸಿದ್ದ ಬ್ರೇಕ್ ಫಾಸ್ಟ್ ಸಭೆಗೆ ಡಿಕೆಶಿ ಹಾಜರಾಗಿ ಸಿಎಂಗೆ ಆಹ್ವಾನ ನೀಡಿದ್ದರು. ಅದರಂತೆ ಸಿಎಂ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಆಗಮಿಸಿ ತಿಂಡಿ ಸೇವಿಸಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಹೈಕಮಾಂಡ್ ಸೂಚಿಸಿದಾಗ ಡಿಕೆಶಿ ಸಿಎಂ ಆಗುತ್ತಾರೆಂದು ಈ ವೇಳೆ ಸಿದ್ದರಾಮಯ್ಯ ಹೇಳಿದ್ದಾರೆ. ನಾವಿಬ್ಬರೂ ಇಂದು ಹಲವು ವಿಚಾರಗಳ ಕುರಿತು ಮಾತನಾಡಿದ್ದೇವೆ. ಡಿ. 8ರಿಂದ ಅಧಿವೇಶನ ಆರಂಭವಾಗುತ್ತಿರುವುದರಿಂದಾಗಿ ವಿಪಕ್ಷಗಳನ್ನು ಕಟ್ಟಿ ಹಾಕುವ ರಣನೀತಿ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಹಿಂದೆಯೂ ಒಗ್ಗಟ್ಟಾಗಿದ್ದೇವು. ಈಗಲೂ ಒಗ್ಗಟ್ಟಾಗಿದ್ದೇವೆ. 2028ಕ್ಕೆ ಮತ್ತೆ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುವುದೇ ನಮ್ಮಿಬ್ಬರ ಸಿದ್ಧಾಂತವಾಗಿದೆ. ಅದಕ್ಕಾಗಿಯೇ ನಾವಿಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಆದರೆ, ವಿರೋಧ ಪಕ್ಷಗಳು ಸುಖಾಸುಮ್ಮನೆ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕರು ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸುವುದಾಗಿ ಹೇಳಿದ್ದಾರೆ. ಅವರು ಯಾವುದೇ ವಿಷಯವನ್ನು ಪ್ರಸ್ತಾಪ ಮಾಡಿದರೂ ನಾವು ಒಗ್ಗಟ್ಟಾಗಿಯೇ ಉತ್ತರ ನೀಡುತ್ತೇವೆ. ಡಿ.8 ರಂದು ಸಂಸದರ ಸಭೆ ಇರುವ ಕಾರಣ ದೆಹಲಿಗೆ ನಾವು ಹೋಗುತ್ತೇವೆ. ಸಮಯ ಸಿಕ್ಕಿದರೆ ಹೈಕಮಾಂಡ್ ಕರೆದರೆ ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ಗೊಂದಲಗಳು ಇಲ್ಲ ಎಂದು ಹೇಳಿದ್ದಾರೆ.

Share.
Leave A Reply