ಹಾಸನದ ಮೊಸಳೆಹೊಸಹಳ್ಳಿಯಲ್ಲಿ ನಡೆದಿರೋದು ಹೃದಯವಿದ್ರಾವಕ ದುರಂತ. ತಮ್ಮ ಪಾಡಿಗೆ ತಾವು ಗಣೇಶ ಮೆರವಣಿಗೆಯಲ್ಲಿ ಸಂಭ್ರಮಾಚರಣೆ ನಡೆಸ್ತಿದ್ದವರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಗಣೇಶ ಮೆರವಣಿಗೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಗಣಪತಿ ಮೆರವಣಿಗೆ ಹೋಗುವಾಗ ಜನರ ಮೇಲೆ ಟ್ರಕ್ ನುಗ್ಗಿದ್ದರಿಂದ ಘಟನೆಯಲ್ಲಿ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದ್ಧೂರಿಯಾಗಿ ಗಣೇಶ ಮೆರವಣಿಗೆ ಸಾಗುತ್ತಿರುವ ವೇಳೆ ವೇಗವಾಗಿ ಬಂದ ಟ್ರಕ್ ಜನರ ಮೇಲೆ ನುಗ್ಗಿದೆ. ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಡಿವೈಡರ್ಗೆ ಡಿಕ್ಕಿ ಆದ ಟ್ರಕ್ ಒಂದು ಬದಿಯಿಂದ ಇನ್ನೊಂದು ಬದಿಗೆ ಬಂದು ಜನರ ಮೇಲೆ ಹರಿದಿದೆ. ಇದರ ಪರಿಣಾಮ ಮೆರವಣಿಗೆಯಲ್ಲಿದ್ದ 9 ಜನರು ಜೀವ ಬಿಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆಯ ಹೆಚ್ಚಾಗುವ ಸಾಧ್ಯತೆ ಇದೆ. ಲಾರಿ ಏಕಾಏಕಿ ನುಗ್ಗಿದ್ದರಿಂದ 10 ರಿಂದ 15 ಜನರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.. ಇನ್ನೂ ಕೆಲವರ ಸ್ಥಿತಿಯಂತೂ ಚಿಂತಾಜನಕವಾಗಿದೆ.
ಇನ್ನು ಈ ಬಗ್ಗೆ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ಈ ಘಟನೆ ತೀವ್ರ ದುಃಖ ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು, ನೊಂದವರ ಜೊತೆ ನಾವೆಲ್ಲರೂ ನಿಲ್ಲೋಣ ಎಂದಿದ್ದಾರೆ. ಇನ್ನು, ಪ್ರಧಾನಿ ಮೋದಿ ಕೂಡ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇತ್ತ ಸುದ್ದಿ ತಿಳಿದ ಕೂಡಲೇ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಡ ರಾತ್ರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಗಾಯಾಳುಗಳ ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್, ಈ ದುರಂತದಲ್ಲಿ ಹೋದ ಜೀವಗಳಿಗೆ ಯಾರು ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ. ಅದರಲ್ಲೂ ಅವರ ತಂದೆ, ತಾಯಿ, ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ಅವರು ಕಟ್ಟಿಕೊಂಡಿದ್ದ ಕನಸುಗಳು ಇವತ್ತು ಮಣ್ಣುಪಾಲಾಗಿದೆ. ಅವರ ಜಾಗದಲ್ಲಿ ನಾವ್ಯಾರು ಊಹೆ ಮಾಡಲು ಸಾಧ್ಯವಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.
Read Also: ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್