ಕಲಬುರಗಿ: ಮನೆಯಲ್ಲಿ ತಲೆ ಸುತ್ತು ಬಂದು ಬಿದ್ದ ಮಹಿಳೆಗೆ ದೆವ್ವ ಹಿಡಿದಿದೆ ಅಂತ ಕಟ್ಟಿಗೆಯಿಂದ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆ ಕಲಬುರಗಿಯ (Kalaburagi) ಆಳಂದದಲ್ಲಿ ನಡೆದಿದೆ. ಆಳಂದ ಮೂಲದ ಮುಕ್ತಾಬಾಯಿ (26) ಹಲ್ಲೆಗೊಳಗಾಗಿ ಸಾವನ್ನಪ್ಪಿದ ದುರ್ದೈವಿ. ದೆವ್ವ ಬಂದಿದೆ ಎಂದು ಬಾಮೈದ ಹಾಗೂ ಕುಟುಂಬಸ್ಥರು ಥಳಿಸಿದ್ದರಿಂದಾಗಿ ಮುಕ್ತಾಬಾಯಿ ಗಂಭೀರವಾಗಿ ಗಾಯಗೊಂಡಿದ್ದರು. ಮುಕ್ತಾಬಾಯಿ, ಮಹಾರಾಷ್ಟ್ರದ ಮುರುಮ್ ಎಂಬ ಊರಿನ ಗಿಡ್ಡೆಪ್ಪ ಎಂಬಾತನೊಂದಿಗೆ ವಿವಾಹವಾಗಿದ್ದರು. ಅಲ್ಲಿಯೇ ವಾಸಿಸುತ್ತಿದ್ದರು. ಈ ದಂಪತಿಗೆ ಐದು ವರ್ಷದ ಮಗ ಇದ್ದಾನೆ. ಮುಕ್ತಾಬಾಯಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬೇವಿನ ಕಟ್ಟಿಗೆಯಿಂದ ಹೊಡೆದರೆ ದೆವ್ವ ಬಿಡುತ್ತದೆ ಎಂದು ನಂಬಿದ್ದ ಆರೋಪಿಗಳು, ರಾತ್ರಿ ಹಾಗೂ ಬೆಳಗ್ಗೆ ಎನ್ನದೇ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಮೃತಳ ತಾಯಿಗೆ ಕರೆ ಮಾಡಿ, ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ನಾವು ಹೊಡೆದು ದೆವ್ವ ಬಿಡಿಸುತ್ತಿದ್ದೇವೆ ಎಂದು ಹೇಳಿದ್ದರು. ಮಗಳಿಗೆ ಯಾವುದೇ ದೆವ್ವ ಹಿಡಿದಿಲ್ಲ, ಆಕೆಯನ್ನು ಹೊಡೆಯಬೇಡಿ ಎಂದು ತಾಯಿ ತಿಪ್ಪವ್ವ ಎಷ್ಟೇ ಮನವಿ ಮಾಡಿದರೂ ಅವರು ಮಾತ್ರ ಬಿಟ್ಟಿಲ್ಲ. ದೆವ್ವ ಇದೆ ಎಂದು ಕಟ್ಟಿಗೆಗಳಿಂದ ಆಕೆಗೆ ಮನಬಂದಂತೆ ಹೊಡೆದಿದ್ದಾರೆ. ತಲೆ ಮತ್ತು ದೇಹದ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿದ್ದರೂ, ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಗಾಣಗಾಪುರದ ಸಂಗಮ ನದಿಯಲ್ಲಿ ಸ್ನಾನ ಮಾಡಿಸಿ ದತ್ತನ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದಾರೆ. ಅಲ್ಲಿಂದ ಗುರುಮಠಕಲ್ ಕಡೆಗೆ ಮತ್ತೊಂದು ಪೂಜೆಗಾಗಿ ಕರೆದೊಯ್ಯುವಾಗ ಮುಕ್ತಾಬಾಯಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಆನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತಿಯ ಕುಟುಂಬಸ್ಥರು ಸೇರಿಕೊಂಡು ಬೇಕೆಂದೇ ಹಲ್ಲೆ ಮಾಡಿದ್ದಾರೆಂದು ಮುಕ್ತಾಬಾಯಿ ತವರು ಮನೆಯವರು ಆರೋಪಿಸಿದ್ದಾರೆ. ಈ ಕುರಿತು ಮಹಾರಾಷ್ಟ್ರದ ಮುರುಮ್ ಪೊಲೀಸ್ ಠಾಣೆಯಲ್ಲಿ ಪ್ರರಣ ದಾಖಲಾಗಿದೆ.
