ನೆಲಮಂಗಲ: ಸಹೋದರಿಯರಿಬ್ಬರ ಬಾಳಿಗೆ ರಾಕ್ಷಸನಾಗಿದ್ದ ಕ್ರೂರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲವ್, ಸೆಕ್ಸ್, ದೋಖಾ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ಪೊಲೀಸರು ಆರೋಪಿ ಶುಭಾಂಶು ಶುಕ್ಲಾ(27) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯು ಸಂತ್ರಸ್ತ ಯುವತಿಯಿಂದ ಲಕ್ಷಾಂತರ ಹಣ ಬೆದರಿಸಿ ಪಡೆದಿರುವ ಜೊತೆಗೆ, ಆಕೆಯ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದಿದ್ದ. ಯುವತಿಯ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಎನ್ನಲಾಗಿದೆ. ಬಂಧಿತನು ಮೊದಲು ಸಂತ್ರಸ್ತೆಯ ಸಹೋದರಿಯಾದ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಬಾಲಕಿ ಸಹೋದರಿಯನ್ನ ಪ್ರೀತಿ ಬಲೆಯಲ್ಲಿ ಬೀಳಿಸಿದ್ದ. ಆನಂತರ ಆ ಯುವತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಈತನ ಮಾತು ನಂಬಿದ್ದ ಯುವತಿ, ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರನ್ನು ನಂಬಿಸಿದ್ದಳು. ನಂತರ ಫ್ಲ್ಯಾಟ್ನಲ್ಲಿ ಶುಭಾಂಶು ಮತ್ತು ಯುವತಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದರು ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಶುಭಾಂಶುಗೆ ಮೊದಲೇ ಮದುವೆಯಾಗಿರುವ ಬಗ್ಗೆ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಆಕೆಯ ಜೊತೆ ತಾನು ವಿಚ್ಛೇದನ ಪಡೆದುಕೊಳ್ಳುತ್ತೇನೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಆತ ನಂಬಿಸಿದ್ದಾನೆ. ನಂತರ ಮತ್ತೊಂದು ಅಪ್ರಾಪ್ತೆಗೆ ಶುಭಾಂಶು ಇದೇ ರೀತಿ ವಂಚಿಸುತ್ತಿರೋದು ಸಂತ್ರಸ್ತೆಗೆ ಗೊತ್ತಾಗಿದೆ. ಆಕೆ ಮುಂದೆ ಈತನ ಬಂಡವಾಳವನ್ನು ಸಂತ್ರಸ್ತೆ ಬಯಲು ಮಾಡಿದ್ದಳು. ಆನಂತರ ಆತ ಚಿತ್ರಹಿಂಸೆ ನೀಡಿದ್ದಾನೆ. ಸಂತ್ರಸ್ತೆ ಬಳಿ 37 ಲಕ್ಷ ರೂ. ಹಣ ಪಡೆದಿದ್ದಾನೆ. ಯುವತಿ ಮನೆಯಲ್ಲಿ 559 ಗ್ರಾಂ ಚಿನ್ನಾಭರಣ ಸಹ ಕದ್ದಿದ್ದಾನೆ. ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಸಂತ್ರಸ್ತೆಯ ಪರಿಚಯಕ್ಕೆ ಮೂಲ ಕಾರಣವಾಗಿದ್ದ ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಶುಭಾಂಶು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈಗ ಯುವತಿ ಹಾಗೂ ಅಪ್ರಾತೆ ಇಬ್ಬರೂ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
