ದೇವನಹಳ್ಳಿ: ಸ್ವಾಮೀಜಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪವೊಂದು ಕೇಳಿ ಬಂದಿದೆ.

ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲ್ಲೂಕಿನ ಮೆಳೆಕೋಟೆಯಲ್ಲಿನ ಮಹರ್ಷಿ ವಾಲ್ಮೀಕಿ ಗುರುಕುಲ ಪೀಠದ ಬ್ರಹ್ಮಾನಂದ ಗುರೂಜಿ ವಿರುದ್ಧ ಇಂತಹ ಗಂಭೀರ ಆರೋಪವೊಂದು ಕೇಳಿ ಬಂದಿದೆ.

ಸೈಟ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಹಣ ಪಡೆದು, ಮರಳಿ ಕೇಳಿದರೆ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆ ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆ ತನ್ನ ಪತಿಯೊಂದಿಗೆ ಸ್ವಾಮೀಜಿಯ ನಿವಾಸದ ಹತ್ತಿರ ವಾಸಿಸುತ್ತಿದ್ದಾರೆ ಎನ್ನಲಾಗಿದೆ. 13 ಲಕ್ಷ ರೂ. ಮೌಲ್ಯದ ಸೈಟ್ ನ್ನು 12 ಲಕ್ಷಕ್ಕೆ ಕೊಡಿಸುವುದಾಗಿ ಸ್ವಾಮೀಜಿ ನಂಬಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಆಗ ನನ್ನ ಬಳಿ ಕೇವಲ 8 ಲಕ್ಷ ರೂ. ಇದೆ ಎಂದು ಹೇಳಿದಾಗ, ನಾನು ಸಹಾಯ ಮಾಡುತ್ತೇನೆಂದು ಸ್ವಾಮೀಜಿ ಹೇಳಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಆಗ ಸ್ವಾಮೀಜಿ ಮಹಿಳೆಯಿಂದ 5 ಲಕ್ಷ ರೂ.ವನ್ನು ಬೇರೊಬ್ಬರಿಗೆ ಕೊಡಿಸಿದ್ದಾರೆ. ವರ್ಷ ಕಳೆದರೂ ಸೈಟ್ ನೀಡಿದ್ದಕ್ಕೆ ಮಹಿಳೆ ಹಣ ಕೇಳಿದ್ದಾರೆ ಎನ್ನಲಾಗಿದೆ. ಆಗ ಸ್ವಾಮೀಜಿ, ‘‘ರೂಂಗೆ ಬಾ ಹಣ ಕೊಡಿಸುತ್ತೇನೆ, ನಿನಗೆ ಹಣ ಬೇಕು, ನನಗೆ ಮಜಾ ಬೇಕು’’ ಎಂದು ಹೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನು ಮಹಿಳೆ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.

ನಂತರ ಸ್ವಾಮೀಜಿ ನಿರಂತರವಾಗಿ ಫೋನ್ ಕರೆ, ಆಡಿಯೋ ಮೆಸೇಜ್ ಹಾಗೂ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಒಂಟಿಯಾಗಿದ್ದ ವೇಳೆ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಆಡಿಯೋ-ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಒತ್ತಡ ಹಾಕಿ, ಅದಕ್ಕಾಗಿ 50 ಸಾವಿರ ರೂ. ನೀಡುವ ಆಮಿಷ ಒಡ್ಡಿದ್ದಾರೆಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಮಹಿಳೆ ಸಾಕ್ಷಿ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಸ್ವಾಮೀಜಿ ಕೂಡ ಪ್ರತಿ ದೂರು ಸಲ್ಲಿಸಿದ್ದಾರೆ. ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಹಣ ನೀಡದಿದ್ದರೆ ಸಮಾಜದಲ್ಲಿ ನಿಮ್ಮ ಹೆಸರು ಹಾಳು ಮಾಡುತ್ತೇವೆಂದು ಹೆದರಿಸುತ್ತಿದ್ದಾರೆಂದು ಸ್ವಾಮೀಜಿ ಪ್ರತಿ ದೂರು ಸಲ್ಲಿಸಿದ್ದಾರೆ.

Share.
Leave A Reply