ಈ ಬಾರಿ RCB ತಂಡ ಹಲವು ದಾಖಲೆಗಳಿಗೆ ಮುನ್ನುಡಿ ಬರೆದಿದೆ. ಅದೇ ರೀತಿ ನಮ್ಮ ಮೆಟ್ರೋದಲ್ಲೂ ಕೂಡ ಹೊಸ ದಾಖಲೆ ಬರೆಯಲು ಆರ್‌ಸಿಬಿ ಕಾರಣವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಬೆಂಗಳೂರಿನಲ್ಲಿ ಸಂಭ್ರಮ ಮನೆ ಮಾಡಿತ್ತು.
ಇದರ ಬೆನ್ನಲ್ಲೇ ವಿಜಯೋತ್ಸವದ ದಿನವಾದ ಜೂನ್ 4ರಂದು ನಮ್ಮ ಮೆಟ್ರೋದಲ್ಲಿ ದಾಖಲೆಯ ಮಟ್ಟದಲ್ಲಿ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಟ್ರೋಫಿ ಗೆದ್ದ ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಇದರ ಬೆನ್ನಲ್ಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು.
ಈ ವಿಚಾರ ತಿಳಿಯುತ್ತಿದ್ದಂತೆಯೇ ತಮ್ಮ ನೆಚ್ಚಿನ ಆಟಗಾರರನ್ನು ನೋಡುವ ಸಲುವಾಗಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂಗೆ ಬರಲು ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಜೂನ್4ರ ಒಂದೇ ದಿನ ನಮ್ಮ ಮೆಟ್ರೋದಲ್ಲಿ 9,66,732 ಪ್ರಯಾಣಿಕರು ಸಂಚರಿಸಿದ್ದಾರೆಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದು ಈವರೆಗಿನ ಗರಿಷ್ಠ ದಾಖಲೆಯಾಗಿದೆ. ವರ್ಷದ ಫೆಬ್ರವರಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಾಗಿತ್ತು. ಇದ್ರ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿತ್ತು. ಆದ್ರೆ, ನಿನ್ನೆ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದಿಂದಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
