ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತ ಮಾಸುವ ಮುನ್ನವೇ ಭಾರತದ ಪಕ್ಕದ ದೇಶ ಬಾಂಗ್ಲಾದಲ್ಲೂ ಭಾರೀ ದುರಂತ ಸಂಭವಿಸಿದೆ. ಬಾಂಗ್ಲಾದೇಶದ ಡಾಕಾದಲ್ಲಿ ವಾಯುಪಡೆ ವಿಮಾನ ಪತನವಾಗಿದೆ. ಶಾಲೆಯೊಂದಕ್ಕೆ ವಿಮಾನ ಅಪ್ಪಳಿಸಿದ್ದು, 19 ಜನರು ಮೃತ ಪಟ್ಟಿದ್ದಾರೆ. 100 ಜನರು ಗಂಭೀರ ಗಾಯವಾಗಿದ್ದಾರೆ. ಘಟನಾ ಸ್ಥಳಕ್ಕೆ ರಕ್ಷಣಾ ಪಡೆ ದೌಡಾಯಿಸಿ ಹೆಲಿಕಾಪ್ಟರ್‌ ಮೂಲಕ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ವಿಮಾನ ಶಾಲೆಯ ಕ್ಯಾಂಟೀನ್‌ ಮೇಲೆ ಬಿದ್ದಿದೆ. ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶಾಲಾ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಪಡೆ ನಂದಿಸುವ ಕೆಲಸದಲ್ಲಿ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಅಂತಸ್ತಿನ ಕಟ್ಟಡದ ಮುಂಭಾಗಕ್ಕೆ ವಿಮಾನ ಅಪ್ಪಳಿಸಿದ್ದು, ಹಲವು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಮಾಹಿತಿ ಮೂಲದಿಂದ ತಿಳಿದು ಬಂದಿದೆ.

ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ಕಚೇರಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ, ಪತನಗೊಂಡ ಎಫ್-7 ಬಿಜಿಐ ಜೆಟ್ ಬಾಂಗ್ಲಾದೇಶದ ವಾಯುಪಡೆಗೆ ಸೇರಿದ್ದು ಎಂದು ದೃಢಪಡಿಸಿದೆ. ಸದ್ಯ ಘಟನಾ ಸ್ಥಳದಲ್ಲಿ ಮೂರು ಅಗ್ನಿಶಾಮಕ ದಳದ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ತೊಡಗಿಕೊಂಡಿದ್ದಾರೆ.

Share.
Leave A Reply