ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವಿರಾಪುರದಲ್ಲಿ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಅನ್ಯ ಜಾತಿ ಹುಡುಗನನ್ನು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾಗಿದ್ದಕ್ಕೆ ತಂದೆ ಮಗಳನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ. ಗರ್ಭಿಣಿಯಾಗಿದ್ದಾಗಲೇ ಕೊಲೆ ಮಾಡಿದ್ದಾನೆ. ಹೀಗಾಗಿ ಈ ಘಟನೆ ಮನಕಲಕುತ್ತಿದೆ.
ಇನಾಂ ವೀರಾಪುರದ ಹುಡುಗನ ಮನೆ ಮುಂದೆ ರಕ್ತದೋಕುಳಿಯೇ ಹರಿದಿದೆ. ಅನ್ಯ ಜಾತಿಯ ಮಾನ್ಯಾ ಪಾಟೀಲ್ ದಲಿತ ಹುಡುಗ ವಿವೇಕಾನಂದ ದೊಡ್ಡಮನಿ ಎಂಬ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದಳು. ಏಳು ತಿಂಗಳ ಗರ್ಭಿಣಿ ಕೂಡ ಆಗಿದ್ದಳು. ಬಿಇ ಓದಿಸಿ ವಿದೇಶಕ್ಕೆ ಕಳುಹಿಸಬೇಕೆಂದು ತಂದೆ-ತಾಯಿ, ಕುಟುಂಬಸ್ಥರು ಕನಸು ಕಂಡಿದ್ದರು. ಆದರೆ, ಯುವತಿ ಮಾತ್ರ ಪ್ರೀತಿಯಲ್ಲಿ ಬಿದ್ದು ಅನ್ಯ ಜಾತಿಯ ಯುವಕನ ಮದುವೆಯಾಗಿದ್ದಾಳೆ. ಇದರಿಂದಾಗಿ ತಂದೆ-ತಾಯಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ಕನಸು ನುಚ್ಚು ನೂರಾಗಿದ್ದು ಒಂದೆಡೆಯಾದರೆ, ಮಗಳು ಅನ್ಯ ಜಾತಿಯ ಯುವಕನನ್ನು ಕೈ ಹಿಡಿದಿದ್ದು ಅವರಿಗೆ ಸಾಕಷ್ಟು ನೋವುಂಟು ಮಾಡಿದೆ. ಇದರಿಂದಾಗಿ ತಂದೆ ಕೋಪದಲ್ಲಿ ಕುದಿಯುತ್ತಿದ್ದ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಹತ್ಯೆಗೀಡಾದ ಮಾನ್ಯ ಹಾಗೂ ಆಕೆಯ ಪತಿ ವಿವೇಕಾನಂದ ದೊಡ್ಡಮನಿ ಇಬ್ಬರೂ ವರೂರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆನಂತರ ಇಬ್ಬರೂ ಇನ್ ಸ್ಟಾ ಗ್ರಾಂನಲ್ಲಿ ಸ್ನೇಹಿತರಾಗಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ಮೆಸೇಜ್ ಮಾಡಿಕೊಳ್ಳುತ್ತಿದ್ದ ಈ ಜೋಡಿ, ಮಧ್ಯೆ ಪ್ರೀತಿ ಹುಟ್ಟಿದೆ. ಇದು ಎರಡೂ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ಮದುವೆಗೆ ವಿರೋಧ ವ್ಯಕ್ತವಾಗಿದೆ. ಯುವತಿ ಲಿಂಗಾಯತ ಸಮಾಜದವಳಾಗಿದ್ದರೆ, ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಎರಡೂ ಮನೆಯವರು ಮದುವೆಗೆ ವಿರೋಧಿಸಿದ್ದಾರೆ. ಆದರೆ, ಯುವತಿ ಮಾತ್ರ ಹಠ ಹಿಡಿದು ಮದುವೆಯಾಗಿದ್ದಳು ಎನ್ನಲಾಗಿದೆ.
ಧಾರವಾಡದಲ್ಲಿ ಕೋಚಿಂಗ್ ಕ್ಲಾಸ್ ಗೆ ತೆರಳಿ ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವಕನನ್ನು ಬೆದರಿಸಿ ಮದುವೆಯಾಗಿದ್ದಾಳೆ ಎನ್ನಲಾಗಿದೆ. ಒತ್ತಾಯಕ್ಕೆ ಮಣಿದು ವಿವಾಹವಾಗಿದ್ದ ಎನ್ನಲಾಗಿದೆ. ಮದುವೆಯಾದ ನಂತರ ಪೊಲೀಸರು ಎರಡೂ ಕುಟುಂಬಗಳನ್ನು ಕರೆಯಿಸಿ ರಾಜಿ ಪಂಚಾಯ್ತಿ ಮಾಡಿಸಿದ್ದರು. ಆದರೂ ಭಯದಿಂದ ಇಬ್ಬರೂ ಹಾವೇರಿಯಲ್ಲಿ ಇದ್ದರು. 7 ತಿಂಗಳುಗಳವರೆಗೆ ಹಾವೇರಿಯಲ್ಲಿ ಜೀವನ ನಡೆಸುತ್ತಿದ್ದ ದಂಪತಿ ಇತ್ತೀಚೆಗೆ ವಾತಾವರಣ ಶಾಂತವಾಗಿರಬಹುದು. ತನ್ನ ಕುಟುಂಬಸ್ಥರು ಎಲ್ಲ ಮರೆತಿರಬಹುದು ಎಂದು ಊರಿಗೆ ಬಂದಿದ್ದಾರೆ. ಆಗ ಹುಡುಗಿಯ ತಂದೆ ಹಾಗೂ ಸಂಬಂಧಿಕರು ಮಾನ್ಯ ಹಾಗೂ ಆಕೆಯ ಅತ್ತೆ, ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಾನ್ಯಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಯುವತಿಯ ತಂದೆ ಗುರುಸಿದ್ದಗೌಡ ಸಿದ್ದನಗೌಡ, ಪ್ರಕಾಶ್ ಗೌಡ ಫಕೀರಗೌಡ, ಆಕಾಶ್ ಗೌಡ ಸಿದ್ದನಗೌಡ ಸೇರಿದಂತೆ 15 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
