ಜೈಪುರ: ಜೈಲಲ್ಲಿ ಇಬ್ಬರು ಕೊಲೆ ಆರೋಪಿಗಳ ಮಧ್ಯೆ (Murder Convicts) ಪ್ರೀತಿ ಅಂಕುರಿಸಿ ಮದುವೆಗಾಗಿ 15 ದಿನಗಳ ಪೆರೋಲ್ ಪಡೆದು ಜೈಲಿನಿಂದ ಆಚೆ ಬಂದಿದ್ದಾರೆ. ಜೈಲಿನಲ್ಲಿ ಇದ್ದಾಗಲೇ ಇಬ್ಬರ ಮಧ್ಯೆ ಪ್ರೀತಿ ಅಂಕುರಿಸಿದೆಯಂತೆ. ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ವ್ಯಕ್ತಿ ಹತ್ಯೆ ಮಾಡಿರುವ ಮಹಿಳೆ ಹಾಗೂ ಐವರನ್ನು ಹತ್ಯೆ ಮಾಡಿದ್ದ ಆರೋಪಿ ಈಗ ಮದುವೆಗೆ ಸಿದ್ಧತೆ ನಡೆಸಿದ್ದಾರೆ.
ರಾಜಸ್ಥಾನದ ಅಲ್ವಾರ್ನಲ್ಲಿ ಮದುವೆಗೆ ತಯಾರಿ ನಡೆದಿದೆ. ಇವರಿಬ್ಬರ ಮಧ್ಯೆ 6 ತಿಂಗಳಿಂದ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ.
ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು ಆಕೆಯ ನಿಶ್ಚಿತ ವರ ಹನುಮಾನ್ ಪ್ರಸಾದ್, ಅಲ್ವಾರ್ನ ಬರೋಡಮೇವ್ನಲ್ಲಿ ತಮ್ಮ ವಿವಾಹಕ್ಕಾಗಿ ರಾಜಸ್ಥಾನ ಹೈಕೋರ್ಟ್ನಿಂದ 15 ದಿನಗಳ ತುರ್ತು ಪೆರೋಲ್ಗಳನ್ನು ಪಡೆದಿದ್ದಾರೆ.
ಪ್ರಿಯಾ ಸೇಠ್, ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವಕ ದುಶ್ಯಂತ್ ಶರ್ಮಾ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಇವರಿಬ್ಬರೂ ಸಂಗನೇರ್ ಓಪನ್ ಜೈಲಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.
ತನಗಿಂತ 10 ವರ್ಷ ದೊಡ್ಡವಳಾದ ತನ್ನ ಗೆಳತಿಯ ಪತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಸಾದ್ ಶಿಕ್ಷೆ ಅನುಭವಿಸುತ್ತಿದ್ದಾನೆ.
ಆರೋಪಿಯ ಗೆಳತಿ ಸಂತೋಷ್ ಅಲ್ವಾರ್ನಲ್ಲಿ ಟೇಕ್ವಾಂಡೋ ಆಟಗಾರ್ತಿಯಾಗಿದ್ದಳು. 2017ರ ಅಕ್ಟೋಬರ್ 2 ರಂದು ರಾತ್ರಿ ತನ್ನ ಪತಿ ಮತ್ತು ಮಕ್ಕಳನ್ನು ಕೊಲ್ಲಲು ತನ್ನ ಮನೆಗೆ ಕರೆದಿದ್ದಳು. ಸಹಚರನೊಂದಿಗೆ ಅಲ್ಲಿಗೆ ಆಗಮಿಸಿದ ಪ್ರಸಾದ್, ಪ್ರೇಯಸಿಯ ಪತಿಯನ್ನು ಹತ್ಯೆ ಮಾಡಿದ್ದ.
ಸಿಕ್ಕಿ ಬೀಳುವ ಭಯದಿಂದ ಸಂತೋಷ್ ನ ಮೂವರು ಮಕ್ಕಳು ಮತ್ತು ಅವರ ಸೋದರಳಿಯನನ್ನೂ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿ ಜೈಲು ಶಿಕ್ಷೆಗೆ ಒಳಗಾಗಿದ್ದ. ಈಗ ಇವರಿಬ್ಬರ ಮಧ್ಯೆ ಲವ್ ಆಗಿದ್ದು, ಮದುವೆಗೆ ಸಿದ್ಧವಾಗಿದ್ದಾರೆ.
