ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET 2025)ರ ಫಲಿತಾಂಶ ಕೊನೆಗೂ ಅಧಿಕೃತವಾಗಿ ಪ್ರಕಟಗೊಂಡಿದೆ. ಕಳೆದ ಹಲವಾರು ದಿನಗಳಿಂದ ಸಿಇಟಿ ಫಲಿತಾಂಶಕ್ಕಾಗಿ ಕಾತರದಿಂದ ನಿರೀಕ್ಷಿಸುತ್ತಿದ್ದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಇದಾಗಿದೆ. ಇದೀಗ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಅಧಿಕೃತವಾಗಿ ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ಫಲಿತಾಂಶಕ್ಕೆ ಭಾರಿ ನಿರೀಕ್ಷೆ

ಪ್ರತಿ ವರ್ಷವೂ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಪರೀಕ್ಷೆಯಾದ ಸಿಇಟಿ ಫಲಿತಾಂಶ 2025ಕ್ಕೆ ಈ ಬಾರಿ ಸುಮಾರು 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಸುಮಾರು 3,11,000 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಇವರು ವೈದ್ಯಕೀಯ, ಇಂಜಿನಿಯರಿಂಗ್, ಅಗ್ರಿಕಲ್ಚರ್, ಯೋಗ ಮತ್ತು ನ್ಯಾಚುರೋಪಥಿ, ಪ್ಯಾರಾಮೆಡಿಕಲ್ ಹಾಗೂ ಇತರೆ ವ್ಯಾಸಂಗದ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆ ಬರೆದಿದ್ದರು.

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಅವರು ನೀಡಿದ ಮಾಹಿತಿಯಂತೆ, ಈ ಬಾರಿ ಪರೀಕ್ಷೆಯು ಯಶಸ್ವಿಯಾಗಿ ನಡೆಸಲ್ಪಟ್ಟಿತ್ತು ಮತ್ತು ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ ಎಂದರು.

KCET ಫಲಿತಾಂಶ ಪ್ರಕಟನೆಯ ನಂತರ, ಇದೀಗ ಆಯ್ಕೆಪಟ್ಟಿ (Merit List) ಆಧಾರಿತವಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ವಿದ್ಯಾರ್ಥಿಗಳು ತಮ್ಮ ರ್ಯಾಂಕ್ ಮತ್ತು ಆಯ್ಕೆಪಟ್ಟಿ ಅನುಸಾರವಾಗಿ ಕೋರ್ಸ್ ಹಾಗೂ ಕಾಲೇಜು ಆಯ್ಕೆ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಡೇಟ್ಸ್ ಮತ್ತು ವಿವರಗಳನ್ನು ಸರಕಾರ ತ್ವರಿತವಾಗಿ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

Also Read: RCB ವಿರುದ್ಧ ಗೆದ್ದು ಬೀಗಿದ ಸನ್‌ರೈಸರ್ಸ್‌ ಹೈದರಾಬಾದ್‌.. ಸೋಲಿಗೆ ಇದೇ ಕಾರಣನಾ?

ಜನಿವಾರ ತೆಗೆಸಿದ್ದ ಪ್ರಕರಣ
ಸಿಇಟಿ ಪರೀಕ್ಷೆ ವೇಳೆ ನಡೆದಿದ್ದ ಜನಿವಾರ ತೆಗೆಸಿದ್ದ ವಿಚಾರವನ್ನು ಫಲಿತಾಂಶ ಪ್ರಕಟಿಸುವ ವೇಳೆ ಉಲ್ಲೇಖಿಸಿದ ಸಚಿವ ಸುಧಾಕರ್, ಆ ಘಟನೆ ಉದ್ದೇಶಪೂರ್ವಕ ಆಗಿದ್ದಲ್ಲ. ಸಿಬ್ಬಂದಿಯ ಎಡವಟ್ಟಿನಿಂದ ಆಗಿದೆ. ಆದರೆ, ಆ ವಿಚಾರದಲ್ಲಿ ಬೀದರ್​ನ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ನ್ಯಾಯ ಒದಗಿಸಿದ್ದೇವೆ ಎಂದರು. ವಿದ್ಯಾರ್ಥಿಯ ಹಾಗೂ ಆತನ ಪೋಷಕರ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಪಡೆದು, ಅವರ ಅಭಿಪ್ರಾಯದ ಮೇರೆಗೆ ಸರಾಸರಿ ಅಂಕ ಹಂಚಿಕೆ ಮಾಡುವ ಮೂಲಕ ರ್ಯಾಂಕ್ ನೀಡಲಾಗಿದೆ. ಆತನಿಗೆ 2ಲಕ್ಷದ 6 ಸಾವಿರ ರ್ಯಾಂಕ್ ಬಂದಿದೆ ಎಂದು ಮಾಹಿತಿ ನೀಡಿದರು.

Share.
Leave A Reply