ದಕ್ಷಿಣ ಕನ್ನಡ ಜಿಲ್ಲೆ (Dakshina Kannada)ಯಲ್ಲಿ ಕೋಮು ಸಾಮರಸ್ಯ ಕದಡೋ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಬಂಟ್ವಾಳ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆಗೆ ಸಂಬಂಧಿಸಿದ ಘಟನೆಗಳು ಆಗಾಗ ಸದ್ದಿಲ್ಲದೆ ಹೊತ್ತಿಕೊಳ್ಳುತ್ತಿವೆ.. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸ್ ಇಲಾಖೆ, ವಿವಿಧ ಸಂಘಟನೆಯಲ್ಲಿ ಗುರುತಿಸಿಕೊಂಡ ವ್ಯಕ್ತಿಗಳ ಗಡಿಪಾರಿಗೆ ಜಿಲ್ಲಾಡಳಿತ ಸಜ್ಜಾಗಿದೆ.

ಸದ್ಯ ಗಡಿಪಾರಿನ ವಿಚಾರಕ್ಕೆ ನೋಟಿಸ್​ ಕೂಡ ಜಾರಿ ಮಾಡಲಾಗಿದೆ.  ಪುತ್ತಿಲ ಪರಿವಾರ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಹಾಗೂ ಮಹೇಶ ಶೆಟ್ಟಿ ತಿಮರೋಡಿ ಸೇರಿದಂತೆ ಜಿಲ್ಲೆಯ ಒಟ್ಟು 36 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಯಿಂದ ಗಡಿಪಾರು ಮಾಡಲು ಪೊಲೀಸರು ಲಿಸ್ಟ್ ರೆಡಿ ಮಾಡಿದ್ದಾರೆ. ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಈ ಲಿಸ್ಟ್‌ನಲ್ಲಿ ಸೇರಿಸಲಾಗಿದೆ.

ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ, ವಿಟ್ಲ, ಪುತ್ತೂರು ಗ್ರಾಮಾಂತರ, ಪುತ್ತೂರು ನಗರ, ಪೂಂಜಾಲುಕಟ್ಟೆ, ಬೆಳ್ತಂಗಡಿ, ಉಪ್ಪಿನಂಗಡಿ, ಕಡಬ, ಸುಳ್ಯ, ಬೆಳ್ಳಾರೆ ಪೋಲೀಸ್ ಠಾಣೆಗೆ ಸೇರಿದ ಹಳೆ ಆರೋಪಿಗಳು ಸಹ ಈ ಪಟ್ಟಿ ಯಲ್ಲಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮುಖಂಡ ಭರತ್ ಕುಮ್ಡೇಲು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವರ ಹೆಸರು ಪಟ್ಟಿಯಲ್ಲಿ ಇದೆ. ಈಗಾಗಲೇ ಅರುಣ್ ಕುಮಾರ್ ಪುತ್ತಿಲಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

ಇನ್ನು ಈ ಗಡಿಪಾರು ಮಾಡಬೇಕಾದವರ ಪಟ್ಟಿಯಲ್ಲಿ ಬರೀ ಹಿಂದೂ ಸಂಘಟನೆಗೆ ಸೇರಿದ ವ್ಯಕ್ತಿಗಳ ಹೆಸರು ಮಾತ್ರ ವಲ್ಲ. ಮುಸ್ಲಿಂ ಸಂಘಟನೆಗಳಲ್ಲಿ ತೊಡಗಿಕೊಂಡವರ ಹೆಸರೂ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಒಟ್ಟೂ 21 ಮಂದಿ ಹಿಂದೂ ಹಾಗೂ 15 ಮಂದಿ ಮುಸ್ಲಿಮರ ಹೆಸರು ಈ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ವ್ಯಾಪ್ತಿಗೆ ಬರುವ ಪೋಲೀಸ್ ಠಾಣೆಗಳಿಂದ ಗಡಿಪಾರಿಗೆ ಪೋಲೀಸರು ಪಟ್ಟಿ ಸಿದ್ಧಪಡಿಸಿದ್ದಾರೆ. ಈ ಪಟ್ಟಿಯನ್ನು ಪೋಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ರಿಲೀಸ್ ಮಾಡಿದ್ದಾರೆ. ಸದ್ಯ ಸಹಾಯಕ ಆಯುಕ್ತರ ಮೂಲಕ ಈಗಾಗಲೇ ಪಟ್ಟಿಯಲ್ಲಿರುವವರಿಗೆ ನೋಟಿಸ್ ರವಾನೆ ಮಾಡಲಾಗಿದೆ.

Share.
Leave A Reply