ರಾಯಚೂರು: ರಾಯರ ಮಠದಲ್ಲಿ ಕನ್ನಡ ಬಳಕೆಗೆ ವಿರೋಧ ವ್ಯಕ್ತಪಡಿಸಿದ ತೆಲುಗು ಭಾಷಿಕರಿಗೆ ಭಕ್ತರು ಶ್ಲೋಕದ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಮಠದ ಮುಖ್ಯದ್ವಾರದಲ್ಲಿ ಕನ್ನಡ ಭಾಷೆಯಲ್ಲಿರುವ ರಾಯರ ಶ್ಲೋಕ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಭಕ್ತರು 1981ರಲ್ಲಿ ಇದೇ ಮಂತ್ರಾಲಯದಲ್ಲಿ ಚಿತ್ರೀಕರಣವಾದ ರಾಜ್ ಕುಮಾರ್ ಅಭಿನಯದ ಭಾಗ್ಯವಂತ ಸಿನೆಮಾದಲ್ಲೂ ಕನ್ನಡದಲ್ಲೇ ರಾಯರ ಶ್ಲೋಕ ಇರುವುದನ್ನ ತೋರಿಸಿ ಟಾಂಗ್ ಕೊಟ್ಟಿದ್ದಾರೆ.
ಆಂಧ್ರಪ್ರದೇಶದಲ್ಲಿರುವ ಕರ್ನಾಟಕದ ಗಡಿಯ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾಷಾ ವಿವಾದ ಸೃಷ್ಟಿಸಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗತ್ತಿದೆ. ಮಠದ ಮುಖ್ಯ ದ್ವಾರದಲ್ಲಿ ಕನ್ನಡ ಭಾಷೆಯಲ್ಲಿ ರಾಯರ ಶ್ಲೋಕವಿದೆ. ಇದೇ ಶ್ಲೋಕ ತೆಲುಗು ಭಾಷೆಯಲ್ಲಿ ಯಾಕಿಲ್ಲ ಅಂತ ತೆಲುಗು ಭಾಷಿಕರು ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಲಿನ ಸಿಎಂ, ಡಿಸಿಎಂ ಅವರನ್ನು ಪ್ರಶ್ನಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಶ್ಲೋಕ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ಇದೀಗ ಅದನ್ನೇ ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುತ್ತಿರುವವರಿಗೆ ಕರ್ನಾಟಕದ ಭಕ್ತರ ಸಾಕ್ಷ ಸಮೇತ ತಿರುಗೇಟು ನೀಡಿದ್ದಾರೆ.
1981ರಲ್ಲಿ ಕನ್ನಡದ ಭಾಗ್ಯವಂತ ಸಿನೆಮಾದಲ್ಲಿ ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಬಾಲ ಕಲಾವಿದನಾಗಿ ನಟಿಸಿದ್ದಾರೆ. ಆ ಸಿನೆಮಾವನ್ನು ಇದೇ ಮಂತ್ರಾಲಯದಲ್ಲೇ ಚಿತ್ರೀಕರಣ ಮಾಡಲಾಗಿದೆ. ಆ ಸಿನೆಮಾದ ಕ್ಲೈಮ್ಯಾಕ್ಸ್ನಲ್ಲಿ ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಜೊತೆ ಮಾತನಾಡಿ, ಮನವೊಲಿಸುವ ದೃಶ್ಯವಿದೆ. ಕನ್ನಡ ಭಾಷೆಯಲ್ಲಿ ಈಗಿರುವ ಶ್ಲೋಕವೂ ಇದೆ ನೋಡಿಕೊಳ್ಳಿ ಅಂತ ಕರ್ನಾಟಕದ ಭಕ್ತರು ಕೌಂಟರ್ ಕೊಟ್ಟಿದ್ದಾರೆ.
