ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ ಐಬಿಪಿಎಸ್‌ ವತಿಯಿಂದ 28 ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಫೀಸ್‌ ಅಸಿಸ್ಟೆಂಟ್‌ ಮತ್ತು ಆಫೀಸರ್‌ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು ಸೆಪ್ಟೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 1,425 ಹುದ್ದೆಗಳು ಖಾಲಿ ಇವೆ.

ಈ ವರ್ಷದ ನವೆಂಬರ್‌-ಡಿಸೆಂಬರ್‌ ಮತ್ತು ಮುಂದಿನ ವರ್ಷದ ಜನವರಿಯೊಳಗೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ಪೂರ್ಣಗೊಳಿಸಿ, ಫೆಬ್ರವರಿ ತಿಂಗಳಿನಲ್ಲಿ ಸಂದರ್ಶನ ನಡೆಸಲು ಐಬಿಪಿಎಸ್‌ ನಿರ್ಧರಿಸಿದೆ. ರಾಜ್ಯದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್‌ ಜತೆಗೆ ಕಳೆದ ಬಾರಿಯಂತೆ ಆಫೀಸ್‌ ಅಸಿಸ್ಟೆಂಟ್‌ ಮತ್ತು ಆಫೀಸರ್‌ ಸ್ಕೇಲ್‌-ಐ ಹುದ್ದೆಗಳಿಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಐಬಿಪಿಎಸ್‌ ನೀಡಿದೆ.

ರಾಜ್ಯದಲ್ಲಿ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳು ವಿಲೀನಗೊಂಡು ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಎಂದಾಗಿದೆ. ಇದರ ಪ್ರಧಾನ ಕಚೇರಿ ಬಳ್ಳಾರಿಯಲ್ಲಿದ್ದು, ಈ ಬ್ಯಾಂಕ್‌ನಲ್ಲಿ 1,425 ಹುದ್ದೆಗಳು ಖಾಲಿ ಇವೆ. ಕನ್ನಡಿಗರಿಗೆ ಹೆಚ್ಚು ಅವಕಾಶ ಸಿಗುವ ಸಾಧ್ಯತೆಯೂ ಇದೆ. ಈ ಬಾರಿ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಿದ್ದು, ಪರೀಕ್ಷಾ ಸಮಯದಲ್ಲಿಯೂ ಮಹತ್ತರ ಬದಲಾವಣೆ ಮಾಡಲಾಗಿದೆ. ಆಸಕ್ತರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

Share.
Leave A Reply