ಬೆಳಗಾವಿ: ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಇಂದು ಮಹತ್ವದ ವಿಧೇಯಕವೊಂದು ಅಂಗೀಕಾರವಾಗುವ ಸಾಧ್ಯತೆ ಇದೆ.

ವಿಧಾನಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಅವರು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮತ್ತು ನಿಯಂತ್ರಣ ವಿಧೇಯಕ-2025ವನ್ನು ಮಂಡಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಒಪ್ಪಿಗೆ ಪಡೆಯಲಾಗಿತ್ತು. ಅಲ್ಲದೇ, ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಸೇರಿದಂತೆ ಒಟ್ಟು 8 ಮಹತ್ವದ ವಿಧೇಯಕಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.

ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ದ್ವೇಷ ಭಾಷಣವು ಗಂಭೀರ ಅಪರಾಧ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಸರ್ಕಾರ ಇಂತಹ ವಿಧೇಯಕ ಅಂಗೀಕಾರಕ್ಕೆ ಮುಂದಾಗಿದೆ. ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ರೆಸಿಡೆನ್ಸ್, ಅಂಗವೈಕಲ್ಯ ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿಯಾಗುವಂತಹ ದ್ವೇಷ ಭಾಷಣವನ್ನು ಯಾರೂ ಮಾಡಿದರೂ ಅದು ಅಪರಾಧ. ಒಂದು ವೇಳೆ ದ್ವೇಷ ಭಾಷಣ ಸಾಬೀತಾದರೆ ಅಂತಹ ವ್ಯಕ್ತಿಗಳಿಗೆ ಮೂರು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸುವ ಅಥವಾ 5 ಸಾವಿರ ದಂಡ ವಿಧಿಸುವ ಅವಕಾಶ ಇರುತ್ತದೆ.

ಅಲ್ಲದೇ, ಮೂರು ವರ್ಷ ಶಿಕ್ಷೆ, 5 ಸಾವಿರ ದಂಡ ಎರಡನ್ನೂ ವಿಧಿಸಲು ಅವಕಾಶ ಇರುತ್ತದೆ. ಇಂತಹ ಭಾಷಣ ಉತ್ತೇಜಿಸುವ, ಪ್ರಚಾರ ಮಾಡುವ, ಸಮರ್ಥಿಸುವವರನ್ನು ಕೂಡ ಶಿಕ್ಷೆಗೆ ಗುರಿ ಪಡಿಸುವ ಅವಕಾಶ ಇರುತ್ತದೆ. ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ಇದರಲ್ಲಿ ಒಳಗೊಂಡಿದೆ. ದ್ವೇಷ ಭಾಷಣ ಪ್ರಸಾರ ಮಾಡುವ ವಾಹಿನಿಗಳು, ಟೆಲಿಕಾಂ ಸೇವಾ ಪೂರೈಕೆದಾರರು, ನೆಟ್ವರ್ಕ್ ಸೇವಾ ಪೂರೈಕೆದಾರರು, ಇಂಟರ್ನೆಟ್ ಸೇವಾ ಪೂರೈಕೆದಾರರು, ವೆಬ್‌ಹೋಸ್ಟಿಂಗ್ ಸೇವಾ ಪೂರೈಕೆದಾರರು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಚ್ ಇಂಜಿನ್‌ಗಳು ಆನ್‌ಲೈನ್ ಪಾವತಿ ಸೈಟ್‌ಗಳು, ಆನ್‌ಲೈನ್ ಹರಾಜು ಸೈಟ್‌ಗಳು, ಆನ್‌ಲೈನ್-ಮಾರುಕಟ್ಟೆಗಳು ಮತ್ತು ಸೈಬರ್ ಕೆಫೆಗಳನ್ನೂ ಇದರ ವ್ಯಾಪ್ತಿಗೆ ಸೇರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರೊಂದಿಗೆ ಪ್ರಮುಖ 8 ವಿಧೇಯಕಗಳು ಕೂಡ ಇಂದು ಅಂಗೀಕಾರವಾಗುವ ಸಾಧ್ಯತೆ ಇದೆ.

Share.
Leave A Reply