Flood Threat : ರಾಜ್ಯ ರಾಜಧಾನಿಯ 200 ಏರಿಯಾಗಳಿಗೆ ಪ್ರವಾಹ ಭೀತಿ..!ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ವರುಣನ ಅಬ್ಬರದಿಂದ ರಸ್ತೆಗಳು ಸ್ವಿಮಿಂಗ್‌ ಪೂಲ್‌ ಆಗಿವೆ. ಈ ಬಗ್ಗೆ ಒಂದು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆ ನೀಡಿತ್ತು. ಆದಾಗ್ಯೂ, ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಮಳೆ ಮುನ್ಸೂಚನೆ ಇದ್ದರೂ, ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂಬ ಆಕ್ಷೇಪ ಸಾರ್ವಜನಿಕರಿಂದ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿ ವಲಯ, ರಾಜರಾಜೇಶ್ವರಿ ನಗರ, ಯಲಹಂಕ ಸೇರಿದಂತೆ ವಲಯವಾರು ಪ್ರವಾಹ ಸಾಧ್ಯತೆ ಇರುವ ಏರಿಯಾಗಳ ಗುರುತು ಮಾಡಲಾಗಿತ್ತು. 8 ವಲಯಗಳಲ್ಲಿ ಏಪ್ರಿಲ್ 15ರಿಂದಲೇ ಪ್ರವಾಹದ ಮುನ್ನೆಚ್ಚರಿಕೆ ವಹಿಸುವಂತೆ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಇಲಾಖೆಗೆ ನೀಡಲಾಗಿತ್ತು. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಲಿದೆ ಎಂಬುದನ್ನು ಇಲಾಖೆ ತಿಳಿಸಿದ್ದರೂ ಸರ್ಕಾರ ಮೈಮರೆತಿದ್ದೇಕೆ ಅಂತಾ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ(Flood Threat).

ವಿಪತ್ತು ನಿರ್ವಹಣಾ ಇಲಾಖೆ ಸುತ್ತೋಲೆಯಲ್ಲಿ ಏನಿತ್ತು?

ಬೆಂಗಳೂರು ಜಲಮಂಡಳಿ, ಬಿಬಿಎಂಪಿ, ಬೆಸ್ಕಾಂ ಮತ್ತು ಸಂಚಾರ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 8 ವಲಯವಾರು ಪ್ರದೇಶಗಳಾದ ಬೊಮ್ಮನಹಳ್ಳಿ ವಲಯ-19, ದಾಸರಹಳ್ಳಿ ವಲಯ-1, ಬೆಂಗಳೂರು ಪೂರ್ವ ವಲಯ-29, ಮಹದೇವಪುರ ವಲಯ-30, ರಾಜರಾಜೇಶ್ವರಿ ನಗರ ವಲಯ-29, ಬೆಂಗಳೂರು ದಕ್ಷಿಣ ವಲಯ-34, ಬೆಂಗಳೂರು ಪಶ್ಚಿಮ ವಲಯ-38 ಮತ್ತು ಯಲಹಂಕ ವಲಯ-10 ಒಟ್ಟು 200 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ಏಪ್ರಿಲ್ 2ರ ಸುತ್ತೋಲೆಯಲ್ಲಿ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿತ್ತು.

ಈ ಪ್ರದೇಶಗಳಿಗೆ ರಿಯಲ್ ಟೈಮ್​​ನಲ್ಲಿ 12 ಗಂಟೆಗೆ ಮುಂಚಿತವಾಗಿ ಪ್ರವಾಹ ಮುನ್ನೆಚ್ಚರಿಕೆ ಹಾಗೂ ಮಳೆ ಮುನ್ಸೂಚನೆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು. ಆದ್ರೆ ಬಿಬಿಎಂಪಿ ಮಾತ್ರ ಯಾವುದೇ ಸಂದೇಶ ರವಾನಿಸದೆ ಇದ್ದಿದ್ರಿಂದ ನಗರದಲ್ಲಿ ಭಾರೀ ಮಳೆಯಿಂದಾಗಿ ಸಾಕಷ್ಟು ಅವಾಂತರಗಳಾಗಿವೆ.

Also Read: BBMP : 50 ಲಕ್ಷ ರೂ. ಪರಿಹಾರ ನೀಡಿ, ಪಾಲಿಕೆಗೆ ವ್ಯಕ್ತಿಯಿಂದ ನೋಟಿಸ್!

‘ಬೆಂಗಳೂರು ಮೇಘ ಸಂದೇಶ’ ಎಂಬ ಮೊಬೈಲ್ ತಂತ್ರಾಂಶ, ಕೇಂದ್ರದ (www.varunamitra.karnataka.gov.in), BBMP DM core group ಗಳಲ್ಲಿ ಹವಾಮಾನದ ಬಗ್ಗೆ ಮಳೆ ಪ್ರಮಾಣ, ತೀವ್ರ ಪ್ರವಾಹಕ್ಕೆ ತುತ್ತಾಗುವ ಸಂಭವನೀಯ ಪ್ರದೇಶಗಳು, ಪರ್ಯಾಯ ರಸ್ತೆ ಮಾರ್ಗಗಳು, ಸಿಡಿಲಿನ ಮಾಹಿತಿ, ಪ್ರಮುಖ ಮಳೆ ನೀರಿನ ಕಾಲುವೆಗಳಲ್ಲಿನ ನೀರಿನ ಮಟ್ಟದ ಬಗ್ಗೆ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಎಚ್ಚರಿಕೆ ಮತ್ತು ಸಂದೇಶಗಳನ್ನು ಪ್ರತಿ 12 ಗಂಟೆಗೊಮ್ಮೆ ನೀಡಲಾಗುತ್ತಿದೆ. ಮುಂದಿನ 24 ಗಂಟೆ ಹಾಗೂ ಮುಂದಿನ 3 ದಿನಗಳ ಮುನ್ಸೂಚನೆಯನ್ನು ನೀಡಲಾಗುತ್ತಿದೆ ಎಂದು ಇಲಾಖೆ ಹೇಳಿತ್ತು. ಸದ್ಯ ಈ ಬಗ್ಗೆ ಮೈಮರೆತು ಬೇಜವ್ದಾರಿ ತೋರಿರುವ ಕಾರಣ ಸಾರ್ವಜನಿಕರು ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ.

Share.
Leave A Reply