BBMP : 50 ಲಕ್ಷ ರೂ. ಪರಿಹಾರ ನೀಡಿ, ಪಾಲಿಕೆಗೆ ವ್ಯಕ್ತಿಯಿಂದ ನೋಟಿಸ್!ಪೂರ್ವ ಮುಂಗಾರು ಆರ್ಭಟದಿಂದ ಬೆಂಗಳೂರು ತತ್ತರಿಸಿ ಹೋಗಿದೆ. ಮಳೆ ಒಂದ್ಕಡೆಯಾದ್ರೆ, ರಸ್ತೆಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಅನುಭವಿಸ್ತಿರೋ ಸಂಕಟ ಅಷ್ಟಿಷ್ಟಲ್ಲ. ಇದೇ ರೀತಿ ರಸ್ತೆ ಗುಂಡಿಗಳಿಂದ ಬೇಸತ್ತ ವ್ಯಕ್ತಿಯೋರ್ವ ಬಿಬಿಎಂಪಿಗೆ ಲೀಗಲ್‌ ನೋಟಿಸಿ ಕಳುಹಿಸಿದ್ದಾರೆ.

ಅಷ್ಟೇ ಅಲ್ಲ ಬರೋಬ್ಬರಿ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಜೊತೆಗೆ ನೋಟಿಸ್ ಶುಲ್ಕ 10 ಸಾವಿರ ರೂಪಾಯಿಗಳನ್ನು ನೀಡಬೇಕು ಅಂತಾ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ನಾನು ಬಿಬಿಎಂಪಿಗೆ ತೆರಿಗೆ ಪಾವತಿ ಮಾಡ್ತಿದ್ದೇನೆ. ಆದ್ರೂ ಕೂಡ ಬಿಬಿಎಂಪಿ ಮೂಲ ಸೌಕರ್ಯಗಳನ್ನ ನೀಡ್ತಾ ಇಲ್ಲ ಅಂತಾ ಆರೋಪಿಸಿದ್ದಾರೆ. ಆಟೋ, ಬೈಕ್ ಮೂಲಕ ಕಳಪೆ ರಸ್ತೆಗಳಲ್ಲಿ ಹೋಗೋಕೆ ಆಗುತ್ತಿಲ್ಲ.

ಬಿಬಿಎಂಪಿಯ ತೀವ್ರ ನಿರ್ಲಕ್ಷ್ಯದಿಂದ ಸಾರ್ವಜನಿಕ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳಿದ್ದು ಈ ರಸ್ತೆಗಳಲ್ಲಿ ಓಡಾಡುವಾಗ ನೋವು ಅನುಭವಿಸುತ್ತಿದ್ದೇವೆ. ನಗರದ ಕಳಪೆ ರಸ್ತೆಗಳಲ್ಲಿ ಸಂಚರಿಸಿ ದೈಹಿಕ, ಮಾನಸಿಕ ಯಾತನೆ ಅನುಭವಿಸುತ್ತಿರುವುದಕ್ಕೆ ಪಾಲಿಕೆ ಕಾರಣವಾಗಿದೆ ಅಂತಾ ಉಲ್ಲೇಖಿಸಿ ಬೆಂಗಳೂರಿನ ರಿಚ್ಮಂಡ್ ಸರ್ಕಲ್‌ ನಿವಾಸಿ ಆಗಿರುವ ಡಾ. ದಿವ್ಯಾ ಕಿರಣ್ ಎಸ್ ಎಂಬವರು ಬಿಬಿಎಂಪಿಗೆ ನೋಟಿಸ್‌ ಕಳುಹಿಸಿದ್ದು, 15 ದಿನಗಳಲ್ಲಿ ಪರಿಹಾರ ನೀಡಬೇಕಾಗಿ ಬೇಡಿಕೆ ಇಟ್ಟಿದ್ದಾರೆ.

Also Read: Gold Price: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಕಳಪೆ ರಸ್ತೆಗಳ ಮೇಲಿನ ಸಂಚಾರದಿಂದಾಗಿ ಬೆನ್ನು ನೋವು, ಕುತ್ತಿಗೆ ನೋವು ಬಂದಿದೆ. ನಾಲ್ಕೈದು ಬಾರಿ ಮೂಳೆ ತಜ್ಞರನ್ನ ಭೇಟಿ ಮಾಡಿದ್ದೇನೆ. ಅಪಾಯಕಾರಿ ರಸ್ತೆಗಳಲ್ಲಿ ಸಂಚರಿಸಿದ್ದೇ ಇದಕ್ಕೆ ಕಾರಣ. ಸೇಂಟ್ ಫಿಲೋಮಿನಾ ಆಸ್ಪತ್ರೆಗೆ 4 ಬಾರಿ ತುರ್ತು ಭೇಟಿ ಕೊಟ್ಟಿದ್ದೇನೆ. ತೀವ್ರ ನೋವಿನಿಂದ ಇಂಜೆಕ್ಷನ್ ತಗೊಂಡಿದ್ದೇನೆ.

ಈಗಲೂ ಔಷಧಿಗಳನ್ನ ಪಡೆಯುತ್ತಿದ್ದೇನೆ. ನೋವಿನಿಂದಾಗಿ ಮಾನಸಿಕ ದೈಹಿಕ ಹಿಂಸೆ ಅನುಭವಿಸ್ತಾ ಇದ್ದೇನೆ. ಇದರಿಂದ ದಿನನಿತ್ಯದ ಚಟುವಟಿಕೆ, ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಆಗ್ತಿದೆ ಅಂತಾ ಟೀಕೆ ಮಾಡಿದ್ದಾರೆ. ಆದ್ರೆ ಈ ಕುರಿತು ಬಿಬಿಎಂಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..

Share.
Leave A Reply