ರಾಜ್ಯ ರಾಜಕಾರಣದಲ್ಲಿ ಸದ್ಯ ಪವರ್‌ ಶೇರಿಂಗ್‌ ವಿಚಾರ ಜೋರಾಗಿದೆ. ಮುಖ್ಯಮಂತ್ರಿ ಹುದ್ದೆ ಸಂಬಂಧಿಸಿ ಘಟಾನುಘಟಿ ರಾಜಕಾರಣಿಗಳಿಂದ ಹಿಡಿದು, ಮಠಾಧೀಶರು, ಸಂಘಟನೆಗಳ ಮುಖಂಡರಿಂದ ಪ್ರಮುಖ ನಾಯಕರ ಪರ-ವಿರುದ್ಧ ಹೇಳಿಕೆಗಳು ಕೇಳಿಬರುತ್ತಿವೆ. ಆದ್ರೆ ಸದ್ಯ ಉಪ ಮುಖ್ಯಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸುತ್ತ ಮುಖ್ಯಮಂತ್ರಿ ಕುರ್ಚಿಗೆ ಸನಿಹದಲ್ಲಿರುವ ಡಿ.ಕೆ. ಶಿವಕುಮಾರ್‌ ಅವರು ಒಂದುಕಡೆ ವಚನ ಪಾಲನೆಯ ಅವಶ್ಯಕತೆಯನ್ನು ಪ್ರತಿಪಾದಿಸುತ್ತಲೇ ಇನ್ನೊಂದುಕಡೆ ತಾವು ಸಾಗಿಬಂದ ಕಷ್ಟದ ದಿನಗಳಲ್ಲಿ ಬೆಂಬಲವಾಗಿ ಜೊತೆಗೆ ನಿಂತವರನ್ನು ನೆನಪಿಸಿಕೊಳ್ಳುತ್ತ ದೊಡ್ಡತನ ಮೆರೆದಿದ್ದಾರೆ.

ಅಧಿಕಾರದಲ್ಲಿರುವಾಗ ಯಾರು ಬೇಕಾದರೂ ಪರವಾಗಿ ನಿಲ್ಲುತ್ತಾರೆ. ಪೂಜೆ-ಪುನಸ್ಕಾರಗಳನ್ನೂ ಮಾಡುತ್ತಾರೆ. ಆದ್ರೆ ಕಷ್ಟದ ದಿನಗಳಲ್ಲಿ ಜೊತೆಗೆ ನಿಂತವರು, ತಮಗಾಗಿ ಮರುಗಿದವರನ್ನು ಮರೆಯೋದಿಲ್ಲ ಅಂತ ಡಿ.ಕೆ. ಶಿವಕುಮಾರ್‌ ಸ್ಪಷ್ಟವಾಗಿ ಹೇಳಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಜೊತೆಗೆ ನಿಂತವರ ಬಗ್ಗೆ ವಿವರಿಸುತ್ತಲೇ ಅವರು ಸ್ಮರಿಸಿಕೊಂಡಿದ್ದು ಒಬ್ಬರ ಹೆಸರು. ಅದುವೇ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡರದ್ದು.

2019ರ ಸೆಪ್ಟೆಂಬರ್‌ ತಿಂಗಳಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ಡಿ.ಕೆ. ಶಿವಕುಮಾರ್‌ ಬಂಧನಕ್ಕೊಳಗಾಗಿದ್ದರು. ಒಂದುಕಡೆ ಇದು ಡಿಕೆಶಿ ಅವರನ್ನು ಆಘಾತಕ್ಕೆ ದೂಡಿದ್ದರೆ ಮತ್ತೊಂದು ಕಡೆ ಅವರ ಆತ್ಮೀಯರೆನಿಸಿಕೊಂಡವರೇ ತಮಗ್ಯಾಕೆ ಇಲ್ಲದ ಉಸಾಬರಿ ಎಂದು ಸೈಲೆಂಟ್‌ ಆಗಿದ್ದರು. ಆದ್ರೆ ಡಿ.ಕೆ. ಶಿವಕುಮಾರ್‌ ಅವರನ್ನು ದೆಹಲಿಯ ತಿಹಾರ್‌ ಜೈಲಿನ ಆಸ್ಪತ್ರೆ ವಾರ್ಡ್‌ನಲ್ಲಿ ಭೇಟಿಯಾಗಿ ಅವರಿಗೆ ಮಾತು ಕೊಟ್ಟಂತೆ ಬೆಂಬಲಕ್ಕೆ ಗಟ್ಟಿಯಾಗಿ ನಿಂತವರೇ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು. ಅದರಂತೆ ಡಿ.ಕೆ. ಶಿವಕುಮಾರ್‌ ಬಂಧನ ವಿರೋಧಿಸಿ 2019ರ ಸೆಪ್ಟೆಂಬರ್‌ 11ರಂದು ತಮ್ಮದೇ ನಾಯಕತ್ವದಲ್ಲಿ ಒಕ್ಕಲಿಗರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್‌ ವರೆಗೆ ಬೃಹತ್‌ ರ್ಯಾಲಿ ನಡೆಸಲಾಯಿತು. ರ್ಯಾಲಿ ನಡೆಸದಂತೆ ತಡೆಯಲು ಆಗ ನಾರಾಯಣಗೌಡರ ಮೇಲೆ ಇನ್ನಿಲ್ಲದಂತೆ ಒತ್ತಡ ಹೇರಲಾಗಿತ್ತು. ಆಡಳಿತ ಪಕ್ಷದ ನಾಯಕರು ಮಾತ್ರವಲ್ಲದೆ ಸ್ವತಃ ಅಂದಿನ ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌, ಎಸಿಪಿ, ಡಿಸಿಪಿ ಹಂತದ ಅಧಿಕಾರಿಗಳು ಈ ಕಾರ್ಯದಲ್ಲಿ ನೇರವಾಗಿ ಭಾಗಿಯಾಗಿದ್ರು. ಮೆರವಣಿಗೆ ಮಾಡಿದ್ರೆ ಮನೆ ಜಪ್ತಿ ಮಾಡಿ ಜೈಲಿಗಟ್ಟುವುದಾಗಿಯೂ ಬೆದರಿಸಿದ್ದಲ್ಲದೆ ಅನುಮತಿ ಕೊಡದೆ ಸತಾಯಿಸಿದ್ರು. ಕೊನೆಗೆ ಗೌಡರು ಈ ಒತ್ತಡಕ್ಕೆ ಬಗ್ಗದೇ ಇದ್ದಾಗ ನೂರಾರು ನಿರ್ಬಂಧಗಳನ್ನು ಒಳಗೊಂಡ 13 ಪುಟಗಳ ಬಾಂಡ್‌ ಪೇಪರ್‌ಗೆ ಸಹಿ ಹಾಕಿಸಿಕೊಂಡು ಮಧ್ಯರಾತ್ರಿ 2 ಗಂಟೆಗೆ ಅನುಮತಿ ನೀಡಿದ್ರು. ಪಟ್ಟು ಬಿಡದೆ ನಾರಾಯಣಗೌಡರು ನಿಂತಿದ್ದರಿಂದಲೇ ಅಂದು ನಡೆದಿದ್ದು ಲಕ್ಷಾಂತರ ಜನರು ಪಾಲ್ಗೊಂಡಿದ್ದ ಬೃಹತ್‌ ರ್ಯಾಲಿ.

ಇದಷ್ಟೇ ಅಲ್ಲದೆ ಡಿ.ಕೆ. ಶಿವಕುಮಾರ್‌ ಸುಮಾರು 50 ದಿನಗಳ ಕಾಲ ತಿಹಾರ್‌ ಜೈಲುವಾಸ ಅನುಭವಿಸಿ ಜಾಮೀನು ಪಡೆದು ಬೆಂಗಳೂರಿಗೆ ಹಿಂದಿರುಗಿದ ಸಂದರ್ಭದಲ್ಲೂ ಅವರಿಗೆ ಭರ್ಜರಿ ಸ್ವಾಗತ ನೀಡಲಾಯ್ತು. ಏರ್‌ಪೋರ್ಟ್‌ ಸಮೀಪದ ಟೋಲ್‌ಗೇಟ್‌ನಿಂದ ಕ್ವೀನ್ಸ್‌ರೋಡ್‌ನ ಕಾಂಗ್ರೆಸ್‌ ಕಚೇರಿಯವರೆಗೆ ತೆರೆದ ವಾಹನದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಮೆರವಣಿಗೆ ಮಾಡಲಾಗಿತ್ತು. ಇದರ ಹಿಂದಿನ ರೂವಾರಿಯೂ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣಗೌಡರು. ಡಿ.ಕೆ. ಶಿವಕುಮಾರ್‌ ಒಬ್ಬ ಆರೋಪಿಯಷ್ಟೇ. ಅರೋಪ ಸಾಬೀತಾಗುವವರೆಗೆ ಅಪರಾಧಿಯಲ್ಲ ಎಂದು ಪ್ರತಿಪಾದಿಸಿದ್ದ ನಾರಾಯಣಗೌಡರು, ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆಗೆ ಡಿ.ಕೆ. ಶಿವಕುಮಾರ್‌ ನೀಡಿದ್ದ ಸಹಾಯವನ್ನು ಹಲವು ಬಾರಿ ನೆನಪಿಸಿಕೊಂಡಿದ್ದಾರೆ. ಹಾಗೆಯೇ ತಮ್ಮ ಸಂಕಷ್ಟದ ದಿನಗಳಲ್ಲಿ ಗೌಡರು ಸೇರಿದಂತೆ ಜೊತೆಗೆ ನಿಂತವರನ್ನು ಮರೆಯದೆ ಡಿ.ಕೆ. ಶಿವಕುಮಾರ್‌ ಅವರೂ ದೊಡ್ಡತನ ತೋರಿದ್ದಾರೆ.

Share.
Leave A Reply