ಅಂತಾರಾಷ್ಟ್ರೀಯ ಮಟ್ಟದಲ್ಲೂ ಕನ್ನಡ ಪರಿಮಳ ಪಸರಿಸುವಂತೆ ಮಾಡಿದ ಕನ್ನಡದ ಸಾಹಿತಿ ಬಾನು ಮುಷ್ತಾಕ್ (Banu Mushtaq )ಮತ್ತು ಅನುವಾದಕಿ ದೀಪಾ ಭಾಸ್ತಿಗೆ ಇಂಟರ್ ನ್ಯಾಷನಲ್ ಪ್ರಶಸ್ತಿ ಬೂಕರ್ ಪ್ರಶಸ್ತಿ ಬಂದು ನಮ್ಮ ಕನ್ನಡ ಭಾಷೆಯ ಹೆಮ್ಮೆಯನ್ನು ಹೆಚ್ಚಿಸಿರೋದು ಎಲ್ಲಾರಿಗೂ ಗೊತ್ತಿರುವ ವಿಚಾರ. ಲಂಡನ್ ನಲ್ಲಿ ಬೂಕರ್ ಪ್ರಶಸ್ತಿ ಪಡೆದು ಬೆಂಗಳೂರಿಗೆ ಬಂದಿರುವ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ತಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಲಾಯಿತು.
ಬುಕರ್ ಪ್ರಶಸ್ತಿ ವಿಜೇತ ಲೇಖಕಿಯರಿಗೆ ಸನ್ಮಾನ
ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿಯರನ್ನ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿ ನಾಡದೇವಿ ಭುವನೇಶ್ವರಿ ವಿಗ್ರಹ ನೀಡಿದ್ರು.. ಇನ್ನು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾನು ಮಷ್ತಾಕ್ ಅವರು, ಸುವರ್ಣ ಕರ್ನಾಟಕ ಸಂಭ್ರಮದ ವೇಳೆ ಬೂಕರ್ ಪ್ರಶಸ್ತಿ ಬಂದಿರುವುದು ತುಂಬಾ ಮಹತ್ವವಾಗಿದೆ. ರಾಜ್ಯದಲ್ಲಿ ನನಗೆ ಈ ಸನ್ಮಾನ ನೀಡಿರುವುದು ಜಾಗತಿಕ ಪ್ರಶಸ್ತಿಗೆ ಸಮಾನವಾಗಿದೆ ಎಂದು ಭಾವುಕರಾಗಿ ಹೇಳಿದ್ರು.

ಕರ್ನಾಟಕದಲ್ಲಿ ಇತರ ಭಾಷೆಗಳ ಬಗ್ಗೆ ಅಸಹಿಷ್ಣುತೆ ಏಕೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ತಮ್ಮನ್ನು ಆಗಾಗ್ಗೆ ಕೇಳುತ್ತವೆ. ಅದಕ್ಕೆ ನಾನು ಕನ್ನಡದ ಬಗ್ಗೆ ನಿಮ್ಮ ತಿಳುವಳಿಕೆ ತಪ್ಪು. ಕನ್ನಡದಷ್ಟು ಸಹಿಷ್ಣು ಭಾಷೆ ಇನ್ನೊಂದಿಲ್ಲ. ಇದು ಇತರ ಅನೇಕರಿಗೆ ವೇದಿಕೆಯನ್ನು ನೀಡಿದ ಭಾಷೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಮತ್ತು ಒಂದು ಬೂಕರ್ ಪ್ರಶಸ್ತಿಯನ್ನು ಹೊಂದಿರುವ ಹೆಗ್ಗಳಿಕೆಯನ್ನು ಕನ್ನಡ ಭಾಷೆ ಹೊಂದಿದೆ ಎಂದು ಮುಷ್ತಾಕ್ ಹೇಳಿದರು.




ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಕತೆಗಳ ಮೂಲಕ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಬಾನು ಮುಷ್ತಾಕ್ , ದೀಪಾ ಬಾಸ್ತಿ ಅವರಿಗೆ ತಲಾ 10 ಲಕ್ಷ ಪುರಸ್ಕಾರ ನೀಡಲಾಗುವುದು ಎಂದು ಘೋಷಿಸಿದರು. ಮುಷ್ತಾಕ್ ಅವರ ಪುಸ್ತಕಗಳನ್ನು ಕರ್ನಾಟಕದ ಎಲ್ಲಾ ಸರ್ಕಾರಿ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದ್ರು.
ಈ ಅಭಿನಂದನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಶಿವರಾಜ್ ತಂಗಡಗಿ, ಜಮೀರ್ ಅಹ್ಮದ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಅಶೋಕ್ ಪಟ್ಟಣ, ನಜೀರ್ ಅಹ್ಮದ್, ಗೋವಿಂದರಾಜ್, ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್ ಎಲ್ ಪುಷ್ಪಾ ಮತ್ತಿತರರು ಭಾಗವಹಿಸಿದ್ದರು.
