ಬೆಂಗಳೂರು: ಮೊಬೈಲ್ ಫೋನ್ ನೋಡಿ ಲೈಂಗಿಕ ಕ್ರಿಕೆಯ ಒತ್ತಾಯ ಮಾಡುತ್ತಿದ್ದ ಪತಿಯ ಕಾಟಕ್ಕೆ ಪತ್ನಿ ಬೇಸತ್ತು ಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆಯೊಂದು ನಡೆದಿದೆ.
ಒಂದೇ ಕಂಪನಿಯಲ್ಲಿ ಎಚ್ ಆರ್ ಆಗಿದ್ದ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೇ ವರ್ಷದ ಸೆಪ್ಟೆಂಬರ್ ನಲ್ಲಿ ಇಬ್ಬರು ಮದುವೆಯಾಗಿದ್ದರು. ಆದರೆ, ಈಗ ಪತ್ನಿ, ಪತಿಯ ಕಾಟಕ್ಕೆ ಬೆಚ್ಚಿ ಬಿದ್ದಿದ್ದಾಳೆ. ಮದುವೆಯಾಗಿ ಕೆಲ ದಿನಗಳು ಚೆನ್ನಾಗಿಯೇ ಇದ್ದ ಪತಿ ಮಂಜುನಾಥ್ ಈಗ ಸೈಕೋ ರೀತಿ ವರ್ತಿಸುತ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.
ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವ ಈತ, ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಓಡಾಡುತ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡುತ್ತಾನಂತೆ. ಅಲ್ಲದೇ, ಪ್ಯಾಸೇಜ್ ಗೆ ಹೋಗಿ ನಿಂತು ಕೂಡ ಅಕ್ಕಪಕ್ಕದವರಿಗೆ ಮುಜುಗುರ ಸೃಷ್ಟಿ ಮಾಡುತ್ತಾನೆ ಎಂದು ಆರೋಪಿಸಿರುವ ಪತ್ನಿ ಈಗ ಪೊಲೀಸರ ಮೊರೆ ಹೋಗಿದ್ದಾರೆ.
ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಕೊಟ್ಟಿದ್ದ ಗಂಡ ಮಂಜುನಾಥ್ ಮನೆ ಬಿಟ್ಟು ಹೋಗಿದ್ದ. ಬಳಿಕ ಮತ್ತೆ ಮನೆ ಬಳಿ ಬಂದ ಆತ, ತನಗೆ ಮತ್ತು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಲ್ಲೆಗೂ ಯತ್ನಿಸಿದ್ದಾನೆ. ಆತನ ಈ ಕೃತ್ಯಕ್ಕೆ ತನ್ನ ಅತ್ತೆ ಮತ್ತು ಮಾವ ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಕೇಂದ್ರ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
