ಬಳ್ಳಾರಿ: ಜಿಲ್ಲೆಯಲ್ಲಿ (Ballari) ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ (Janardhan Reddy) ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣ ದೊಡ್ಡ ಆತಂಕ ಮತ್ತು ಅನುಮಾನಗಳಿಗೆ ಕಾರಣವಾಗಿದೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಪ್ರಾಪ್ತರು ಸೇರಿದಂತೆ ಒಟ್ಟು 8 ಜನರನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದ ನಿವಾಸಿಗಳಾದ 8 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುತ್ತಿರುವ ವೇಳೆ ಅಜಾಗರೂಕತೆಯಿಂದ ಅಥವಾ ದುರುದ್ದೇಶದಿಂದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ರುಕ್ಮಿಣಿ ಅವೆನ್ಯೂ ಲೇಔಟ್‌ನಲ್ಲಿರುವ ಸೈಟ್ ಇಂಜಿನಿಯರ್ ರಿಜ್ವಾನ್, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶುಕ್ರವಾರ 20 ರಿಂದ 25 ವರ್ಷ ವಯಸ್ಸಿನ 8 ರಿಂದ 10 ಜನ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು ಎಂದು ತಿಳಿದು ಬಂದಿದೆ.

ಇದು ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರಿಗೆ ಸೇರಿದ್ದಾಗಿದೆ. ಬೆಂಕಿಯಿಂದ ಟಿವಿ, ಕುರ್ಚಿಗಳು, ಸೋಫಾ ಸೆಟ್‌ಗಳು, ಕಿಚನ್ ಸೆಟ್, ಎಸಿ, ಫ್ರಿಡ್ಜ್, ವುಡನ್ ಬಾಗಿಲುಗಳು ಸೇರಿದಂತೆ ಹಲವು ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸುಮಾರು 1.25 ಕೋಟಿ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

‘ಬಳ್ಳಾರಿಯನ್ನು ಭಸ್ಮ ಮಾಡುತ್ತೇವೆ’ ಎಂಬ ಶಾಸಕ ಭರತ್ ರೆಡ್ಡಿ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಬೇಕು ಎಂದು ರಿಜ್ವಾನ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ಹೀಗಾಗಿ ಇದು ರಾಜಕೀಯ ಪ್ರೇರಿತವೇ? ಅಥವಾ ಕಿಡಿಗೇಡಿಗಳಿಂದ ನಡೆದ ಕೃತ್ಯವೇ ೆಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share.
Leave A Reply