ಬೆಳಗಾವಿ: ಈ ವರ್ಷ ರಾಜ್ಯದ 518 ಪ್ರದೇಶಗಳಲ್ಲಿ ಆರೆಸ್ಸೆಸ್ ಪಥ ಸಂಚಲನ ನಡೆದಿದ್ದು, ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಸರ್ಕಾರ ಹೇಳಿದೆ.

ಈ ಬಗ್ಗೆ ಕಾಂಗ್ರೆಸ್ ಸರ್ಕಾರವೇ ಹೇಳಿಕೆ ಕೊಟ್ಟಿದೆ. ಆರೆಸ್ಸೆಸ್ ಪಥ ಸಂಚಲನದ ವೇಳೆ ಎಲ್ಲಿಯೂ ಗಲಾಟೆ, ದೊಂಬಿ ನಡೆದಿಲ್ಲ ಎಂದಿದೆ. ಇತ್ತೀಚೆಗಷ್ಟೇ ಸರ್ಕಾರ ಹಾಗೂ ಆರೆಸ್ಸೆಸ್ ಮಧ್ಯೆ ದೊಡ್ಡ ಸಂಘರ್ಷವೇ ನಡೆದಿತ್ತು. ಸರ್ಕಾರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಆರೆಸ್ಸೆಸ್ ಕಾರ್ಯಕ್ರಮ ಹಾಗೂ ಪಥಸಂಚಲನ ನಡೆಸಬಾರದು. ಆರೆಸ್ಸೆಸ್ ಸಂವಿಧಾನ ವಿರೋಧಿ ಚಟುವಟಿಕೆ ನಡೆಸುತ್ತಿದೆ ಎಂದು ಕಾಂಗ್ರೆಸ್ ನ ಕೆಲವು ನಾಯಕರು ಆರೋಪಿಸಿದ್ದರು. ಅದರಲ್ಲೂ ಸಚಿವ ಪ್ರಿಯಾಂಕ್ ಖರ್ಗೆಯಂತೂ ದೊಡ್ಡ ಆರೋಪಗಳನ್ನು ಮಾಡಿದ್ದರು.

ನಂತರ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರ ಕೋರ್ಟ್ ಮೆಟ್ಟಿಲೇರಿ, ನಂತರ ಐತಿಹಾಸಿಕ ಪಥಸಂಚಲನ ನಡೆಯಿತು. ಈ ಬಗ್ಗೆ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ರಾಜ್ಯದ 518 ಪ್ರದೇಶಗಳಲ್ಲಿ ಆರೆಸ್ಸೆಸ್ ಪಥಸಂಚಲನ ನಡೆದಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಸ್ವಯಂ ಸೇವಕರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಉತ್ತರ ನೀಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಈ ಕುರಿತು ಉತ್ತರ ನೀಡಿದ್ದಾರೆ.

ಗೃಹ ಸಚಿವರ ಉತ್ತರದಂತೆ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲೇ ಎರಡನೇ ಅತಿ ಹೆಚ್ಚು (51) ಪಥ ಸಂಚಲನಗಳು ನಡೆದಿವೆ. 6 ರಿಂದ 7 ಸಾವಿರ ಸ್ವಯಂ ಸೇವಕರು ಭಾಗವಹಿಸಿದ್ದಾರೆ. ಅತೀ ಹೆಚ್ಚು ಪಥ ಸಂಚಲನಗಳು ಬೆಂಗಳೂರಿನಲ್ಲಿ ನಡೆದಿವೆ.

ಬೆಂಗಳೂರಿನಲ್ಲಿ 97 ಪಥ ಸಂಚಲನಗಳು ನಡೆದಿವೆ. ಇನ್ನುಳಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 45 ಪಥ ಸಂಚಲನಗಳು, ಬಾಗಲಕೋಟೆ ಜಿಲ್ಲೆಯಲ್ಲಿ 33 ಪಥಸಂಚಲನಗಳು, ಬೀದರ್ ಜಿಲ್ಲೆಯಲ್ಲಿ 41, ಶಿವಮೊಗ್ಗ ಜಿಲ್ಲೆಯಲ್ಲಿ 19, ವಿಜಯಪುರ ಜಿಲ್ಲೆಯಲ್ಲಿ 18, ಬೆಳಗಾವಿಯಲ್ಲಿ 17, ತುಮಕೂರು ಜಿಲ್ಲೆಯಲ್ಲಿ 11, ಚಿತ್ರದುರ್ಗ ಜಿಲ್ಲೆಯಲ್ಲಿ 11, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10, ಉಡುಪಿ ಜಿಲ್ಲೆಯಲ್ಲಿ 10, ಚಿಕ್ಕಗಳೂರು ಜಿಲ್ಲೆಯಲ್ಲಿ 11, ಯಾದಗಿರಿ ಜಿಲ್ಲೆಯಲ್ಲಿ 12, ರಾಯಚೂರು ಜಿಲ್ಲೆಯಲ್ಲಿ 10 ಪಥಸಂಚಲನಗಳು ನಡೆದಿವೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

Share.
Leave A Reply