ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಇಲಾಖೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು. ಇದರ ಪರಿಣಾಮ ಬಸ್​ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಶಾಲಾ-ಕಾಲೇಜುಗಳು, ಕಚೇರಿಗಳಿಗೆ ದಿನನಿತ್ಯ ಓಡಾಡುವವರು ಬಸ್‌ ಸಿಗದೆ ಸಮಸ್ಯೆ ಎದುರಿಸಿದ್ದರು.

ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ, ಹಾವೇರಿ ಸೇರಿ ರಾಜ್ಯದ ಹಲವೆಡೆ ಬೆಳಗ್ಗೆ 6 ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದರು. ಈ ಮಧ್ಯೆ ಮುಷ್ಕರ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸದ್ಯ ಮುಷ್ಕರ ಸ್ಥಗಿತಗೊಳಿಸುವಂತೆ ಸಾರಿಗೆ ನೌಕಕರಿಗೆ ತಾಕೀತು ಮಾಡಿದೆ.

ನಾಳೆ ಮುಷ್ಕರ ನಡೆಸುವುದಿಲ್ಲ
ನಾಳೆ ಮುಷ್ಕರ ನಡೆಸುವುದಿಲ್ಲ ಎಂದು ರಸ್ತೆ ಸಾರಿಗೆ ನೌಕರರ ಸಂಘವು ಹೈಕೋರ್ಟ್​ಗೆ ಮಾಹಿತಿ ನೀಡಿದೆ. ನಗರದ ಜೆ. ಸುನೀಲ್ ಎಂಬುವರು ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ನ್ಯಾಯಪೀಠಕ್ಕೆ ರಸ್ತೆ ಸಾರಿಗೆ ನಿಗಮಗಳ ನೌಕರರ ಜಂಟಿ ಕ್ರಿಯಾ ಸಮಿತಿ ಪರ ವಕೀಲರು ಈ ಮಾಹಿತಿ ನೀಡಿದರು.

ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೋಕೇಟ್​ ಜನರಲ್​ ಶಶಿಕಿರಣ್​ ಶೆಟ್ಟಿ, ಸಾರಿಗೆ ಎಂಬುದು ಅಗತ್ಯ ಸೇವೆಯಾಗಿದೆ. ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವುದರಿಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಕೈಗಾರಿಕೆ ವಿವಾದ ಕಾಯ್ದೆಯಡಿಯಲ್ಲಿ ಸರ್ಕಾರ ಸಾರಿಗೆ ನಿಗಮಗಳ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಲಾಗುತ್ತಿದೆ. ಈ ನಡುವೆ ಹೈಕೋರ್ಟ್​ ಸಾರಿಗೆ ಮುಷ್ಕರ ನಡೆಸದಂತೆ ಆದೇಶ ನೀಡಿದೆ. ಆದರೂ, ಮುಷ್ಕರ ಮುಂದುರೆದಿದೆ ಎಂದು ತಿಳಿಸಿದರು.

ಎಸ್ಮಾ ಅಡಿ ಬಂಧನ
ಅಗತ್ಯ ಸೇವೆ ನಿರ್ವಹಣಾ ಕಾಯ್ದೆ(ಎಸ್ಮಾ) ಜಾರಿಯಲ್ಲಿದ್ದರೂ ಮುಷ್ಕರ ಮುಂದುವರೆಸಲಾಗಿದೆ. ಎಸ್ಮಾ ಕಾಯ್ದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು. ಮುಷ್ಕರ ನಿಂತಿರುವುದಕ್ಕೆ ಸಂಬಂಧಿಸಿದಂತೆ ಬುಧವಾರ ನ್ಯಾಯಪೀಠಕ್ಕೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಆಗಸ್ಟ್​ 7ಕ್ಕೆ ಮುಂದೂಡಿತು.

Share.
Leave A Reply