ಹಾಸನ: ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಆಗುಂತಕನೋರ್ವ ಬಾಲಕಿಯನ್ನು ಬೆನ್ನಟ್ಟಿ ಆಕೆಯ ಮನೆಯವರೆಗೂ ಹೋಗಿ, ವಾರ್ನ್ ಮಾಡಿದ್ದ. ಈ ವಿಡಿಯೋ ಕಂಡು ಜನರು ಬೆಚ್ಚಿ ಬಿದ್ದಿದ್ದರು. ಸದ್ಯ ಆ ಆಗುಂತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಆತಂಕ ಸೃಷ್ಟಿಸಿದ್ದ ಅಪರಿಚಿತನನ್ನು ಕೋಲಾರ (Kolar) ಜಿಲ್ಲೆಯ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯು ಜ.17ರಂದು ಹಾಸನದ (Hassan) 80 ಅಡಿ ರಸ್ತೆಯಲ್ಲಿ ಬಾಲಕಿ ಬೆನ್ನಟ್ಟಿ ಅವಳ ಮನೆಯವರೆಗೂ ತೆರಳಿದ್ದ. ಗಮನಿಸಿದ್ದ ಬಾಲಕಿ ಗಾಬರಿಯಲ್ಲೇ ಓಡೋಡಿ ಮನೆ ಸೇರಿದ್ದಳು.
ನಂತರ ಮನೆ ಬಳಿ ಬಂದ ಆರೋಪಿ ಗೇಟ್ ಹೊರಗೆ ನಿಂತು ಒಳಗೆ ಇಣುಕಿನೋಡಿ ಹೋಗಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಗಾಬರಿಗೊಂಡಿದ್ದ ಪಾಲಕರು, ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆ ನಡೆದ ಮೂರು ದಿನಗಳ ನಂತರ ಆ ಆಗುಂತಕನನ್ನು ಪೊಲೀಸರು ಬಂಧಿಸಿದ್ದಾರೆ.
