ಬೆಂಗಳೂರು, ಜ.15: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಸ್ವಾಮೀಜಿ ಬ್ರಹ್ಮೈಕ್ಯರಾಗಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿಯ ಕಾಗಿನೆಲೆ ಗುರುಪೀಠದ ಸಿದ್ಧರಾಮಾನಂದ ಪುರಿ ಸ್ವಾಮೀಜಿ ನಿಧನರಾಗಿದ್ದಾರೆ. ಬೆಳಗಿನ ಜಾವ ಸಿದ್ಧರಾಮಾನಂದ ಪುರಿ ಸ್ವಾಮೀಜಿ ಅವರು ಹೃದಯಾಘಾತಕ್ಕೆ ಇಹಲೋಕ ತ್ಯಜಿಸಿದ್ದು, ಲಕ್ಷಾಂತರ ಭಕ್ತರಿಗೆ ಬರಸಿಡಿಲೇ ಬಡಿದಂತಾಗಿದೆ.

ಇನ್ನು, ರಾಜ್ಯದಲ್ಲಿ ಅಪಾರ ಭಕ್ತ ಸಮೂಹ ಹೊಂದಿರುವ ಶ್ರೀಗಳಲ್ಲಿ ಇವರು ಕೂಡ ಒಬ್ಬರಾಗಿದ್ದರು. ಸಿದ್ಧರಾಮಾನಂದ ಪುರಿ ಸ್ವಾಮೀಜಿಯವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಮೂಲದವರಾಗಿದ್ದರು. ಕಾಗಿನೆಲೆ ಕನಕ ಗುರುಪೀಠದ ಮಹಾಸಂಸ್ಥಾನದ ಕಲಬುರಗಿ ವಿಭಾಗದ ಶಾಖಾಮಠದ ಸ್ವಾಮೀಜಿಯಾಗಿದ್ದು, ನಾಲ್ಕೂ ಪೀಠಗಳಲ್ಲಿ ಸಿದ್ಧರಾಮಾನಂದಪುರಿ ಶ್ರೀಗಳು ಅತ್ಯಂತ ಕಿರಿಯ ಸ್ವಾಮೀಜಿಯಾಗಿದ್ರು. ಆದ್ರೀಗ ಅತಿ ಕಿರಿ ವಯಸ್ಸಿಗೆ ಸ್ವಾಮೀಜಿಗಳು ಬ್ರಹ್ಮೈಕ್ಯ ಆಗಿರೋದು ಭಕ್ತರು ದುಃಖತಪ್ತರಾಗಿದ್ದಾರೆ.

ಸಿದ್ಧರಾಮಾನಂದಪುರಿ ಸ್ವಾಮೀಜಿಗಳ ಬದುಕು ಎಲ್ಲರಿಗೂ ಮಾದರಿ. ಯಾಕಂದ್ರೆ, 18ನೇ ವರ್ಷದಲ್ಲಿಯೇ ಮನೆ ತೊರೆದಿದ್ದ ಶ್ರೀಗಳು, ಮುರುಘಾಮಠಕ್ಕೆ ಹೋಗಿ ಭಕ್ತಿ‌ಮಾರ್ಗ ಆಧ್ಯಾತ್ಮದ ಮೊರೆ ಹೋಗಿದ್ದರು. 1992ರಲ್ಲಿ ರಾಜ್ಯದಲ್ಲಿ ಕಾಗಿನೆಲೆ ಪೀಠಗಳ ಸ್ಥಾಪನೆ ಮಾಡಲಾಯ್ತು. ಇವರು ಶಿವಾನಂದ ಪುರಿ, ಈಶ್ವರಾನಂದ ಪುರಿ, ನಿರಂಜನನಾಂದಪುರಿ ಸ್ವಾಮೀಜಿಗಳೊಂದಿಗೆ ವೇದಾಧ್ಯಯನ ಮಾಡಿದ್ರು. ಕಠಿಣ ವೇದಾಧ್ಯಯನ ಮುಗಿಸಿಕೊಂಡು ಬಂದು ಕಲಬುರಗಿ ವಿಭಾಗದ ಕನಕಗುರು ಪೀಠಕ್ಕೆ ಪೀಠಾಧಿಪತಿಗಳಾಗಿ ಆಯ್ಕೆಯಾಗಿದ್ರು. 2009ರಲ್ಲಿ ಸಿಂಧನೂರಲ್ಲಿ ಕುಠೀರದಲ್ಲಿ ಪೀಠ ಸ್ಥಾಪನೆ ಮಾಡಲಾಗಿದೆ. ಆ ಬಳಿಕ 2011ರಲ್ಲಿ ತಿಂಥಣಿಯಲ್ಲಿ ಶ್ರೀಮಠ ಶುರು ಮಾಡಿದ್ರು. 2012-13 ರಲ್ಲಿ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಮಾಡಿ ಪ್ರಸಿದ್ಧಿಯಾದ್ರು. ಹಾಲು ಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ಮೂಲಕ ಇಡೀ ಭಾರತದಾದ್ಯಂತ ಇರುವ ಬುಡಕಟ್ಟು ಸಮುದಾಯಗಳ ಒಗ್ಗೂಡಿಕೆ ಮತ್ತು‌ ಸಮ್ಮಿಲನ ಮಾಡಿಸಿದ ಏಕೈಕ ಶ್ರೀಗಳು ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಹಠಾತ್ ಹೃದಯಾಘಾತಕ್ಕೆ ಒಳಗಾದ ಸ್ವಾಮೀಜಿ ನಿಧನಕ್ಕೆ ಭಕ್ತರು ಕಂಬನಿ ಮಿಡಿದಿದ್ದಾರೆ.

ಇನ್ನು, ಶ್ರೀಗಳ ಅಗಲಿಕೆಗೆ ಗಣ್ಯರು ಕೂಡ ಕಂಬನಿ ಮಿಡಿದಿದ್ದಾರೆ. ಸಿಎಂ ಸಿದ್ಧರಾಮಯ್ಯ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಾಲುಮತ ಸಮಾಜದ ಸಚಿವರು, ಗಣ್ಯರೊಂದಿಗೆ ಸಿದ್ಧರಾಮಾನಂದ ಪುರಿ ಸ್ವಾಮೀಜಿ ಅತ್ಯಾಪ್ತತೆ ಹೊಂದಿದ್ದರು. ಸ್ವಾಮೀಜಿ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. 3 ದಿನಗಳ ಹಿಂದೆ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಶ್ರೀಗಳು ಈಗ ನಮ್ಮೊಂದಿಗಿಲ್ಲ ಎಂಬ ಸುದ್ದಿ ತಿಳಿದು ಭಕ್ತರು ಆಘಾತಕ್ಕೀಡಾಗಿರೋದಂತೂ ಸುಳ್ಳಲ್ಲ.

Share.
Leave A Reply