ಬೆಂಗಳೂರು: ಕಾರು ಅಡ್ಡಾದಿಡ್ಡಿ ಓಡಿಸಿದ ವಿದ್ಯಾರ್ಥಿಯೋರ್ವ ಡೆಲಿವರಿ ಬಾಯ್ ಪ್ರಾಣ ತೆಗೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಐಷಾರಾಮಿ ಕಾರನ್ನ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಿಲಿಕಾನ್ ಸಿಟಿಯ ಹೆಚ್ಎಸ್ಆರ್ ಲೇಔಟ್ನ 27ನೇ ಕ್ರಾಸ್ ನಡೆದಿದೆ. ಪಾದಚಾರಿ ಸಂತೋಷ್ ದೊಡ್ಡಗೌಡರ್ (26) ಸಾವನ್ನಪ್ಪಿರುವ ದುರ್ದೈವಿ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಾದಚಾರಿ ಸಂತೋಷ್ ದೊಡ್ಡಗೌಡರ್ ಬೆಳಗಾವಿಯ ಬೈಲಹೊಂಗಲ ಮೂಲದವರು. ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ರಾತ್ರಿ ಫುಟ್ ಪಾತ್ನಲ್ಲಿ ಊಟ ಮಾಡಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕಾರು ಚಾಲನೆ ಮಾಡುತ್ತಿದ್ದ ಅಬ್ದುಲ್ ರೆಹಮಾನ್ ನಿಂದ ಈ ಕೃತ್ಯ ನಡೆದಿದೆ.
ಸಂತೋಷ್‌ಗೆ ಡಿಕ್ಕಿ ಹೊಡೆದ ನಂತರ ಅಲ್ಲಿ ಹೊರಟಿದ್ದ ಇನ್ನಿತರ ವಾಹನಗಳಿಗೂ ಡಿಕ್ಕಿ ಹೊಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧಿಸಿರುವ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
