ಕಳೆದ ವರ್ಷ ಇದೇ ಸಂದರ್ಭದಲ್ಲಿ ಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ ಮಾಡಲಾಗಿತ್ತು. ಈ ವೇಳೆ ಕೋಟ್ಯಾಂತರ ರೂ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿತ್ತು. ಇದೀಗ ಅಂತಹದೆ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಗುಂಪು ಘರ್ಷಣೆ ನಡೆದಿದೆ. ಜಿಲ್ಲೆಯ ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ತಡರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆಸುತ್ತಿರುವಾಗ ಕಲ್ಲು ತೂರಾಟ ನಡೆದಿದೆ. ಮಸೀದಿಯಿಂದಲೇ ಲೈಟ್ ಆಫ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮೆರವಣಿಗೆಯಲ್ಲಿದ್ದವರು ಆರೋಪಿಸಿದ್ದಾರೆ.
ಬೀದಿಗಳಲ್ಲಿ ಮೆರವಣಿಗೆ ಮೂಲಕ ಗಣಪನನ್ನು ತರುವ ವೇಳೆ ಮಸೀದಿ ಮುಂದೆ ಹಾದುಹೋಗಬೇಕೆನ್ನುವಷ್ಟರಲ್ಲಿ, ದಿಢೀರ್ ಲೈಟ್ ಆಫ್ ಮಾಡಿ ಮಸೀದಿಯಿಂದ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ದೊಣ್ಣೆಗಳನ್ನು ಕೂಡ ಎಸೆದಿದ್ದಾರೆ ಎಂದು ಸ್ಥಳದಲ್ಲಿದ್ದವರು ಆರೋಪಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಹೋಂಗಾರ್ಡ್ಗಳು ಸೇರಿ 8 ಜನರು ಗಾಯಗೊಂಡಿದ್ದಾರೆ.
ಮಸೀದಿ ಬಳಿ ಬಂದಾಗ ಯಾವುದೇ ಘೋಷಣೆ ಕೂಗಬಾರದು. ಮೈಕ್ ಹಾಕಬಾರದು ಎಂದು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಮೈಕ್ ಆಫ್ ಮಾಡಿ ಮೆರವಣಿಗೆ ಮಾಡಲಾಗುತ್ತಿತ್ತು. ಇದಾದ ಬಳಿಕ ಏಕಾಏಕಿ ಲೈಟ್ ಆಫ್ ಮಾಡಿ ಗಣಪತಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿದೆ ಎಂದು ಹಿಂದೂಗಳು ಆರೋಪಿಸಿದ್ದಾರೆ. ನಾವು ಸುಮ್ಮನಿದ್ದರೂ ನಮ್ಮ ಮೇಲೆ ಈ ರೀತಿ ದಾಳಿ ಮಾಡಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಅವರ ಹಬ್ಬ ಮಾಡಿದಾಗ ನಾವು ಗಲಾಟೆ ಮಾಡಿದ್ದವ ಎಂದು ಹಿಂದೂ ಯುವಕರು ಪ್ರಶ್ನೆ ಮಾಡುತ್ತಿದ್ದಾರೆ.
ಸದ್ಯ ಈ ಘಟನೆ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪೇಟೆಯ ರಸ್ತೆಗಳಲ್ಲಿನ ಎಲ್ಲಾ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.
Read Also : ಮದ್ದೂರಲ್ಲಿ ಉದ್ವಿಗ್ನ ಸ್ಥಿತಿ: ನಾಳೆವರೆಗೂ ನಿಷೇಧಾಜ್ಞೆ ಜಾರಿ!