ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ತಲೆ ಎತ್ತಿರುವ ಅಕ್ರಮ ರೆಸಾರ್ಟ್, ಹೋಂ ಸ್ಟೇಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
ಕಬಿನಿ ಹಿನ್ನೀರಿನಲ್ಲಿ ರೆಸಾರ್ಟ್ ಗಳಿಗೆ ಕಡಿವಾಣ ಹಾಕಿ, ಕಬಿನಿ ಉಳಿಸಿ, ಕಾಡು ಬೆಳೆಸಿ ಎಂದು ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಜಾಲತಾಣದ ಮೂಲಕ ಹೋರಾಟಕ್ಕೆ ಕರೆ ನೀಡಿದ್ದಾರೆ. ಅಕ್ರಮ ರೆಸಾರ್ಟ್ ಗಳ ವಿರುದ್ಧ ಪೋಸ್ಟ್ ಮಾಡಿ ಕಿಡಿಕಾರಿರುವ ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು , ಡಾ.ರಾಜಕುಮಾರ್ ಅವರ ಅಭಿನಯದ ಗಂಧದಗುಡಿ ಚಿತ್ರದ ಡೈಲಾಗ್ ಇಟ್ಟುಕೊಂಡು ಅಭಿಯಾನ ಆರಂಭಿಸಿದ್ದಾರೆ.
‘ನಿಮ್ ದಮ್ಮಯ್ಯ ಅಂತೀನಿ, ಕಾಡು ಉಳಿಸಿ, ಅಭಯಾರಣ್ಯ ಉಳಿಸಿ’ ಎಂಬ ಕೂಗು, ನಮ್ಮನ್ನ ಉಳಿಸಿ ಅಂತ ಅರಣ್ಯಾಧಿಕಾರಿಗಳಿಗೆ ಪ್ರಾಣಿಗಳೇ ದೂರು ನೀಡುವ ಚಿತ್ರಗಳನ್ನ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ರೆಸಾರ್ಟ್ ಹೋಮ್ ಸ್ಟೇಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.
