ಬೆಂಗಳೂರು: ಸಿಎಂ ನಿವಾಸದ ಬಂದೋಬಸ್ತ್ ಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಗೈರಾಗಿ ಕರ್ತವ್ಯ ಲೋಪ ಎಸಗಿರುವ ಸಂಗತಿ ಬಯಲಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.
ಸಿಎಂ ಕಾವೇರಿ ನಿವಾಸದ ಬಂದೋಬಸ್ತ್ಗೆ ನಿಯೋಜಿಸಿದ್ದರೂ ಕರ್ತವ್ಯಕ್ಕೆ ಗೈರಾದ ಹಿನ್ನೆಲೆಯಲ್ಲಿ ಕಾನ್ ಸ್ಟೇಬಲ್ ಅಮಾನತು ಆಗಿದ್ದಾರೆ. ಅದಲ್ಲದೇ, ಬೆಂಗಳೂರು ನಗರ ಪೊಲೀಸರು(Bengaluru City Police) ಕರ್ತವ್ಯ ಲೋಪ ಎಸಗುತ್ತಿರುವ ಸಂಗತಿಗಳು ಬಯಲಿಗೆ ಬರುತ್ತಿದ್ದು, ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಕಳೆದ 15 ದಿನಗಳಿಂದ 33ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಇತ್ತೀಚೆಗಷ್ಟೇ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿತ್ತು. ವಿವೇಕನಗರ ಪೊಲೀಸರ (Vivek Nagar) ವಿರುದ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಠಾಣೆಯ ಇನ್ಸ್ಪೆಕ್ಟರ್ ಸೇರಿ ನಾಲ್ವರು ಸಿಬ್ಬಂದಿಯನ್ನ ಅಮಾನತು ಮಾಡಲಾಗಿತ್ತು.
ಅಲ್ಲದೇ, ಇದೀಗ ಮತ್ತೆ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ASI ಶ್ರೀನಿವಾಸ್ ಮೂರ್ತಿ(ನಂದಿನಿ ಲೇಔಟ್ ಠಾಣೆ), ASI ಜಯರಾಮೇಗೌಡ, ಹೆಡ್ ಕಾನ್ಸ್ಟೆಬಲ್ ಧರ್ಮ (ಸುಬ್ರಹ್ಮಣ್ಯ ನಗರ ಠಾಣೆ), ಕಾನ್ಸ್ಟೆಬಲ್ ನಜೀರ್ (ಸಂಜಯನಗರ ಠಾಣೆ)ರನ್ನು ಅಮಾನತು ಮಾಡಿ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಆದೇಶ ಹೊರಡಿಸಿದ್ದಾರೆ.
ದೂರು ನೀಡಲು ಬಂದಿದ್ದ ವ್ಯಕ್ತಿಯ ದೂರು ಪರಿಗಣಿಸದ ಹಿನ್ನೆಲೆಯಲ್ಲಿ ನಂದಿನಿ ಲೇಔಟ್ ಠಾಣೆಯ ಎಎಸ್ ಐ ಶ್ರೀನಿವಾಸಮೂರ್ತಿಯನ್ನು ಅಮಾನತು ಮಾಡಲಾಗಿದೆ. ಕೋರ್ಟ್ನಿಂದ ಸಮನ್ಸ್ ಬಂಬಿದ್ದರೂ ಸಾಕ್ಷಿಗಳನ್ನು ಸರಿಯಾದ ಸಮಯಕ್ಕೆ ಕೋರ್ಟ್ ಗೆ ಹಾಜರು ಪಡಿಸದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯನಗರ ಠಾಣೆಯ ಇಬ್ಬರು ಸಿಬ್ಬಂದಿ ಅಮಾನತು ಆಗಿದ್ದಾರೆ. ಬಂದೋಬಸ್ತ್ಗೆ ನಿಯೋಜನೆ ಮಾಡಿದ್ದರೂ ಗೈರಾಗಿದ್ದ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ಈ ಮೂಲಕ ಪೊಲೀಸ್ ಇಲಾಖೆ ಶಿಸ್ತಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಪೊಲೀಸ್ ಸಿಬ್ಬಂದಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಕಿವಿ ಹಿಂಡುತ್ತಿದೆ.
