ಹಾಸನ: ಯುವಕನೋರ್ವ ಕೊಲೆ ಮಾಡಿ, ಶವದ ಮುಂದೆ ನಿಂತು ಸೆಲ್ಫಿ ವಿಡಿಯೋ(Selfie Video) ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಭಯಾನಕ ಘಟನೆಯೊಂದು ನಡೆದಿದೆ.
ಈ ಘಟನೆ ನಗರದ (Hassan) ಬಿಟ್ಟಗೋಡನಹಳ್ಳಿ ಬೈಪಾಸ್ ರಸ್ತೆಯ ಹತ್ತಿರ ನಡೆದಿದೆ. ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ ಕೀರ್ತಿ ಕೊಲೆಯಾಗಿರುವ ಯುವಕ ಎನ್ನಲಾಗಿದೆ. ಆಲೂರು ತಾಲ್ಲೂಕಿನ ಕಣಗಾಲ್ ಗ್ರಾಮದ ಉಲ್ಲಾಸ್ ಹಾಗೂ ಆತನ ಸ್ನೇಹಿತರು ಕೊಲೆ ಮಾಡಿರುವ ಆರೋಪಿಗಳು ಎನ್ನಲಾಗಿದೆ.
ಆರೋಪಿಗಳು ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಂತರ ಶವದ ಮುಂದೆ ನಿಂತು ಕೊಲೆ ಮಾಡಿರುವುದಾಗಿ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದೆ. ಕೊಲೆಯಾಗಿರುವ ಕೀರ್ತಿ ಹಾಗೂ ಉಲ್ಲಾಸ್ ಇಬ್ಬರೂ ಆಟೋ ಚಾಲಕರು ಎನ್ನಲಾಗಿದೆ. ಇಬ್ಬರು ಸ್ನೇಹಿತರಾಗಿದ್ದರು. ಆದರೆ, ಸೋಮವಾರದ ದಿನ ಇಬ್ಬರ ಮಧ್ಯೆ ಜಗಳವಾಗಿದೆ. ಇದರಿಂದ ಕೋಪಗೊಂಡ ಉಲ್ಲಾಸ್, ತನ್ನ ಸ್ನೇಹಿತರೊಂದಿಗೆ ಗಾಂಜಾ ಸೇವಿಸಿ ಕೀರ್ತಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಆನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಅಶ್ಲೀಲ ಮಾತುಗಳನ್ನು ಹೇಳುತ್ತ, ನಾನು ಬೆಳೆದಿದ್ದೇನೆ. ಈಗ ಕೊಲೆ ಮಾಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ. ನಂತರ ಪೊಲೀಸರು ಸ್ಥಳ ಪತ್ತೆ ಹಚ್ಚಿದ್ದಾರೆ. ಕುರಿತು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
