ಬೆಂಗಳೂರು, ಜ.10 : ಕಾಸರಗೋಡು ವಿಚಾರವಾಗಿ ಕರ್ನಾಟಕ ಹಾಗೂ ಕೇರಳ ನಡುವೆ ಮತ್ತೊಮ್ಮೆ ಭಾಷಾ ಸಮರ ಭುಗಿಲೆದ್ದಿದೆ. ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಅನ್ನು ಕಡ್ಡಾಯವಾಗಿ, ಪ್ರಥಮ ಭಾಷೆಯಾಗಿ ಕಲಿಸಬೇಕೆಂಬ ಮಸೂದೆ ವಿರುದ್ಧ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಇನ್ನು, ಈ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದ್ದು, ಕರ್ನಾಟಕದ ಗಡಿ ಭಾಗದ ಪ್ರದೇಶಗಳಲ್ಲಿ ಕೇರಳದ‌ ಕಮ್ಯುನಿಸ್ಟ್‌ ಸರ್ಕಾರ ಕನ್ನಡ ಶಾಲೆಗಳಲ್ಲಿ ಒತ್ತಾಯ ಪೂರ್ವಕವಾಗಿ ಮಲಯಾಳಂ ಭಾಷೆ ಹೇರಲು ಹೊರಟಿರೋದು ಖಂಡನೀಯವಾಗಿದ್ದು, ಶಾಲೆಗಳಲ್ಲಿ ಮಲಯಾಳಂ ಭಾಷೆ ಕಡ್ಡಾಯ ಮಸೂದೆಗೆ ವಿವಿಧ ಕನ್ನಡಪರ ಸಂಘಟನೆಗಳು ವಿರೋಧಿಸಿದ್ದು, ಬಿಜೆಪಿಯೂ ಸಹ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕರ್ನಾಟಕದ ವಿಚಾರದಲ್ಲಿ ಪದೇಪದೆ ಮೂಗು ತೂರಿಸುವ ಕೆಲಸ‌ ಮಾಡ್ತಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಕೇರಳಕ್ಕೆ ಹಲವು ಬಾರಿ ಸಹಾಯ ಹಸ್ತ ಚಾಚಿದೆ. ಇತ್ತೀಚೆಗೆ ಕೋಗಿಲು ಲೇಔಟ್ ವಿಚಾರಕ್ಕೆ ವೇಣುಗೋಪಾಲ್ ಸರ್ಕಾರದ ಮೇಲೆ ಅಬ್ಬರಿಸಿದ್ರು, ಅವರ ಅಬ್ಬರಕ್ಕೆ ಇಲ್ಲಿನ ಕಾಂಗ್ರೆಸ್ ಸರ್ಕಾರವೇ ನಡುಗಿ ಹೋಯ್ತು. ಕೇರಳದ ಕನ್ನಡ ಶಾಲೆಗಳನ್ನು ಉಳಿಸಲು ಸಿಎಂ ಕೇವಲ ಪತ್ರಗಳನ್ನು ಬರೆದರೆ ಸಾಲದು, ಕೆ.ಸಿ. ವೇಣುಗೋಪಾಲ್ ಕಿವಿ ಹಿಂಡಬೇಕು. ಅಲ್ಲಿ ಮಲಯಾಳಂ ಭಾಷೆ ಕಡ್ಡಾಯ ಮಾಡದಂತೆ ನೋಡಿಕೊಳ್ಳುವಂತೆ ಅವರಿಗೆ ಹೇಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಇದೇ ವೇಳೆ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದನದಲ್ಲಿ ಚರ್ಚೆ ಮಾಡದೇ ಬಿಲ್ ಅಂಗೀಕಾರ ಮಾಡಿದ್ದರು. ಸರ್ಕಾರ ಹಿಂಬಾಗಿಲ ಮೂಲಕ ಮಸೂದೆ ಅಂಗೀಕಾರ ಮಾಡಿಕೊಂಡಿತ್ತು. ಚರ್ಚೆಗೆ ಅವಕಾಶ ನೀಡಿರಲಿಲ್ಲ. ಈ ಮಸೂದೆ ಬಗ್ಗೆ ಸಾಕಷ್ಟು ಆಕ್ಷೇಪವಿದೆ. ಬಿಜೆಪಿ ಅಷ್ಟೇ ಅಲ್ಲ ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಪ್ರತಿಯೊಬ್ಬರು ಈ ಮಸೂದೆಯನ್ನ ವಿರೋಧ ಮಾಡುತ್ತಿದ್ದಾರೆ. ಈ ಕಾರಣಕ್ಕೆ ರಾಜ್ಯಪಾಲರು ತಡೆ ಹಿಡಿದಿರಬಹುದು. ನಾವು ಕೂಡ ವಿಧೇಯಕಕ್ಕೆ ಅಂಕಿತ ಹಾಕದಂತೆ ಮನವಿ ಮಾಡಿದ್ದೆವು ಎಂದರು.

Share.
Leave A Reply