ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿರುವ ಆರೋಪ ಕೇಳಿ ಬಂದಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರನ್ನು ಅಮಾನತು ಮಾಡಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯ ವಿವೇಕನಗರ ಪೊಲೀಸ್ (Vivek Nagar) ಠಾಣೆಯ ಸಿಬ್ಬಂದಿ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಲಾಕಪ್ ಡೆತ್ ಆರೋಪ ಕೇಳಿ ಬರುತ್ತಿದ್ದಂತೆ ತನಿಖೆಗೆ ಸೂಚಿಸಲಾಗಿತ್ತು. ತನಿಖೆಯ ನಂತರ ನಾಲ್ವರನ್ನು ಅಮಾನತು ಮಾಡಲಾಗಿದೆ. ದರ್ಶನ್ ಎಂಬ ಯುವಕ ಲಾಕಪ್ ಡೆತ್ ಆಗಿದ್ದಾನೆಂಬ ಆರೋಪ ಕೇಳಿ ಬಂದಿದೆ. ಸಾವನ್ನಪ್ಪಿರುವ ದರ್ಶನ್ ಕಳೆದ ಕೆಲವು ದಿನಗಳ ಹಿಂದೆ ಕುಡಿದು ಬಂದು ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ.
ಹೀಗಾಗಿ ಪೊಲೀಸರು ಆತನನ್ನು ಠಾಣೆಗೆ ಕರೆತಂದು ಠಾಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದರಿಂದಾಗಿ ದರ್ಶನ್ ತೀವ್ರವಾಗಿ ಅಸ್ವಸ್ಥನಾಗಿದ್ದ. ಹೀಗಾಗಿ ಆತನನ್ನು ನೆಲಮಂಗಲದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ ಎನ್ನಲಾಗಿದೆ. ಹೀಗಾಗಿ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಪೊಲೀಸರು ಠಾಣೆಯಲ್ಲಿ ಕೂಡಿ ಹಾಕಿ ಥಳಿಸಿದ್ದರಿಂದಾಗಿ ಆತ ಸಾವನ್ನಪ್ಪಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದರು.
ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್ ಐಆರ್ ದಾಖಲಾಗುತ್ತಿದ್ದಂತೆ ಇಲಾಖೆಯು ತನಿಖೆಗೆ ಒಳಪಡಿಸಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.
